ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಪ್ರಕರಣ: ಇ.ಡಿಯಿಂದ ಎಎಪಿ ಸಂಸದ ಸಂಜಯ್ ಸಿಂಗ್ ಬಂಧನ

Published 4 ಅಕ್ಟೋಬರ್ 2023, 13:22 IST
Last Updated 4 ಅಕ್ಟೋಬರ್ 2023, 13:22 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆಯಿಂದ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಇ.ಡಿ ಬಂಧಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಕೆಲವರ ಸ್ಥಳಗಳ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ. ಲಂಚವನ್ನು ನೀಡಿದ ಕೆಲವು ಡೀಲರ್‌ಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಎಎಪಿ ಬಲವಾಗಿ ನಿರಾಕರಿಸಿತ್ತು.

ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ನೀತಿಯನ್ನು ದೆಹಲಿ ಸರ್ಕಾರ ರದ್ದು ಮಾಡಿತ್ತು. ಪ್ರಕರಣ ಕುರಿತಂತೆ ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ್ದರು, ನಂತರ, ಇ.ಡಿ ಅಕ್ರಮ ಹಣ ಸಾಗಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಪ್ರಕರಣವನ್ನು ದಾಖಲಿಸಿಕೊಂಡಿತ್ತು.

51 ವರ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಜೊತೆ ನಂಟು ಹೊಂದಿರುವ ಸಿಬ್ಬಂದಿ ಮತ್ತು ಇತರರನ್ನು ಇ.ಡಿ ಈ ಹಿಂದೆ ವಿಚಾರಣೆಗೆ ಒಳಪಡಿಸಿತ್ತು.

ಆರೋಪ ಪಟ್ಟಿಯಲ್ಲಿ ಏನಿದೆ?

ಅಬಕಾರಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಸಂಸದ ಸಂಜಯ್ ಸಿಂಗ್‌ ಹಾಗೂ ಅವರ ಕಚೇರಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಸಿಂಗ್‌ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಕ್ಷಕ್ಕೆ ರಾಷ್ಟ್ರ ರಾಜಧಾನಿಯಲ್ಲಿರುವ ರೆಸ್ಟೋರೆಂಟ್‌ಗಳ ಮಾಲೀಕರಿಂದ ಹಣ ಸಂಗ್ರಹಿಸಲು ಸಿಂಗ್‌ ಯತ್ನಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ದೂರಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಧ್ಯವರ್ತಿ ದಿನೇಶ್‌ ಅರೋರಾ ಎಂಬುವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ‘ಮಾಫಿಸಾಕ್ಷಿ’ಯಾಗುವುದಾಗಿ ದಿನೇಶ್‌ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ನ್ಯಾಯಾಲಯವೂ ಅಂಗೀಕರಿಸಿದೆ. ‘ದೆಹಲಿಯಲ್ಲಿ ನನ್ನ ಒಡೆತನದ ರೆಸ್ಟೋರೆಂಟ್‌ವೊಂದಿದೆ. ಅಲ್ಲಿ ನಡೆದ ಭೋಜನ ಕೂಟದಲ್ಲಿ ಸಿಂಗ್‌ ಅವರನ್ನು ನಾನು ಭೇಟಿ ಮಾಡಿದ್ದೆ. ಈ ವೇಳೆ ಅವರು ಪಕ್ಷದ ಚುನಾವಣಾ ವೆಚ್ಚಕ್ಕಾಗಿ ಹಣ ಸಂಗ್ರಹಿಸುವಂತೆ ನನ್ನಲ್ಲಿ ಕೋರಿದ್ದರು. ನಾನು ವೈಯಕ್ತಿಕವಾಗಿ ₹82 ಲಕ್ಷ ಮೊತ್ತದ ಚೆಕ್ ಕೂಡ ನೀಡಿದ್ದೇನೆ’ ಎಂದು ದಿನೇಶ್‌ ನೀಡಿರುವ ಹೇಳಿಕೆಯು ಆರೋಪ ಪಟ್ಟಿಯಲ್ಲಿ ದಾಖಲಾಗಿದೆ. ‘ಪ್ರಕರಣದ ಮತ್ತೊಬ್ಬ ಆರೋಪಿ ಅಮಿತ್ ಅರೋರಾ ಎಂಬಾತ ತನ್ನ ಮದ್ಯದ ಅಂಗಡಿಯನ್ನು ಓಖ್ಲಾದಿಂದ ಪಿತಾಮಪುರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದ. ಇದಕ್ಕಾಗಿ ಆತ ನನ್ನ ನೆರವು ಬಯಸಿದ್ದ. ಸಿಂಗ್‌ ಅವರ ಮೂಲಕ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ ಅವರನ್ನು ಸಂಪರ್ಕಿಸಿ ಸಹಾಯ ಮಾಡುವ ಭರವಸೆ ನೀಡಿದ್ದೆ. ಕೊನೆಗೆ ಅಬಕಾರಿ ಇಲಾಖೆ ಮೂಲಕ ಅವರ ಅಂಗಡಿಯನ್ನು ಸ್ಥಳಾಂತರಿಸಲಾಯಿತು’ ಎಂದು ದಿನೇಶ್‌ ಹೇಳಿದ್ದಾರೆ.  ‘ಅಲ್ಲದೇ ಸಿಂಗ್‌ ಜೊತೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನೂ ಆತ ಭೇಟಿ ಮಾಡಿದ್ದಾನೆ. ಐದಾರು ಬಾರಿ ಸಿಸೋಡಿಯಾ ಜೊತೆ ಮಾತನಾಡಿದ್ದಾನೆ’ ಎಂದು ಅವರು ನೀಡಿರುವ ಹೇಳಿಕೆಯು ದೋಷಾರೋಪ ಪಟ್ಟಿಯಲ್ಲಿದೆ.

ಮೋದಿ ವಿರುದ್ಧ ‘ಇಂಡಿಯಾ’ ವಾಗ್ದಾಳಿ

ಸಂಜಯ್‌ ಸಿಂಗ್‌ ಹಾಗೂ ಎಎಪಿ ಬೆಂಬಲಕ್ಕೆ ನಿಂತಿರುವ ‘ಇಂಡಿಯಾ’ವು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ‘ಮೋದಿ ಸರ್ಕಾರವು ನಿರಂಕುಶ ಧೋರಣೆ ತಳೆದಿದೆ. ತನಿಖಾ ಏಜೆನ್ಸಿಗಳ ಮೂಲಕ ದಾಳಿ ನಡೆಸಿ ಪ್ರತಿಪಕ್ಷಗಳ ನಾಯಕರಲ್ಲಿ ಭೀತಿ ಹುಟ್ಟಿಸಲು ಮುಂದಾಗಿದೆ’ ಎಂದು ರಾಜ್ಯಸಭೆಯಲ್ಲಿನ ಕಾಂಗ್ರೆಸ್‌ನ ಉಪ ನಾಯಕ ಪ್ರಮೋದ್‌ ತಿವಾರಿ ಟೀಕಿಸಿದ್ದಾರೆ.  ‘ಮಹಾರಾಷ್ಟ್ರ ಪಶ್ಚಿಮ ಬಂಗಾಳ ಛತ್ತೀಸಗಢ ಹಾಗೂ ಜಾರ್ಖಂಡ್‌ನಲ್ಲಷ್ಟೇ ಸಿಬಿಐ ಅಥವಾ ಇ.ಡಿ ದಾಳಿ ನಡೆಯುತ್ತಿದೆ. ಗುಜರಾತ್‌ ಮಧ್ಯಪ್ರದೇಶ ಅಸ್ಸಾಂ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಾಳಿ ನಡೆಯುತ್ತಿಲ್ಲ ಏಕೆ? ಇದು ಸರ್ವಾಧಿಕಾರದ ಪರಾಕಾಷ್ಠೆ’ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವುತ್ ಆಪಾದಿಸಿದ್ದಾರೆ. ‘ಇದು ಬಿಜೆಪಿ ಮೋದಿ ಅಮಿಶಾ ಹಾಗೂ ಅದಾನಿಯ ನಿರಂಕುಶ ಪ್ರಭುತ್ವದ ಹೊಸ ಮಾದರಿಯಾಗಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಘನಶ್ಯಾಮ್‌ ತಿವಾರಿ ಹೇಳಿದ್ದಾರೆ. ‘ಎಎಪಿ ನಾಯಕನ ಬಂಧನ ಇದು ಅಚ್ಚರಿಯ ಸಂಗತಿಯೇನಲ್ಲ. ಆದರೆ ಅವರ ಬಂಧನವು ದುಃಖದ ಸಂಗತಿಯಾಗಿದೆ. ಮೋದಿ ಹಾಗೂ ಅಮಿತ್‌ ಶಾ ಅವರ ಅಣತಿಯಂತೆ ಲೋಕಸಭಾ ಚುನಾವಣೆವರೆಗೂ ಈ ಬಂಧನದ ಸರಣಿ ಮುಂದುವರಿಯಲಿದೆ’ ಎಂದು ಆರ್‌ಜೆಡಿ ನಾಯಕ ಮನೋಜೆ ಕೆ. ಝಾ ದೂರಿದ್ದಾರೆ.  

‘ಪಕ್ಷವನ್ನು ಏಕೆ ಆರೋಪಿಯಾಗಿಸಿಲ್ಲ’

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಲಾಭ ಪಡೆದುಕೊಂಡಿದೆ ಎನ್ನಲಾಗಿರುವ ರಾಜಕೀಯ ಪಕ್ಷವನ್ನು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಆರೋಪಿ ಸ್ಥಾನದಲ್ಲಿ ಏಕೆ ನಿಲ್ಲಿಸಿಲ್ಲ ಎಂದು ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯವನ್ನು (ಇ.ಡಿ) ಪ್ರಶ್ನಿಸಿದೆ.

ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಬುಧವಾರ ಕೋರ್ಟ್‌ ಈ ಪ್ರಶ್ನೆ ಎತ್ತಿದೆ. ದೆಹಲಿ ಅಬಕಾರಿ ನೀತಿ ರೂಪಿಸುವಲ್ಲಿ ಮತ್ತು ಅದರ ಅನುಷ್ಠಾನದಲ್ಲಿನ ಅಕ್ರಮಗಳಲ್ಲಿ ಸಿಸೋಡಿಯಾ ಅವರು ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ, ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಇದೆ. ಈ ಅಬಕಾರಿ ನೀತಿಯನ್ನು ಈಗ ರದ್ದು ಮಾಡಲಾಗಿದೆ.

ಹಣವು ಒಂದು ರಾಜಕೀಯ ಪಕ್ಷಕ್ಕೆ ಸಂದಿದೆ ಎಂಬುದು ಇಡೀ ಪ್ರಕರಣದ ತಿರುಳು. ಆದರೆ ಆ ರಾಜಕೀಯ ‍ಪಕ್ಷವು ಈಗಲೂ ಆರೋಪಿ ಆಗಿಲ್ಲದಿರುವುದು ಏಕೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು
ಎಸ್‌.ವಿ.ಎನ್. ಭಟ್ಟಿ ಅವರಿದ್ದ ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರನ್ನು ಪ್ರಶ್ನಿಸಿತು.

ರಾಜು ಅವರು ಇ.ಡಿ. ಮತ್ತು ಸಿಬಿಐ ಪರ ಹಾಜರಾಗುತ್ತಿದ್ದಾರೆ. ಅಬಕಾರಿ ನೀತಿ ರೂಪಿಸುವಲ್ಲಿ ಪಿತೂರಿ ನಡೆದಿದೆ. ವಿಜಯ್ ನಾಯರ್ ಹಾಗೂ ಇತರ ಕೆಲವರು ಸಮನ್ವಯಕಾರರಾಗಿ ಕೆಲಸ ಮಾಡಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ನಾಯರ್ ಅವರು ಸಿಸೋಡಿಯಾ ಅವರ ನಿಕಟವರ್ತಿ ಎಂದು ಆರೋಪಿಸಲಾಗಿದೆ. ನಾಯರ್ ಅವರು ಸಿಸೋಡಿಯಾ ಅವರ ಏಜೆಂಟ್ ಎಂಬುದನ್ನು ಸಾಬೀತು ಮಾಡಲು ಯಾವ ಆಧಾರವೂ ಇಲ್ಲ, ಅವರು ಹಣ ಪಡೆದಿದ್ದಾರೆ ಎಂಬುದಕ್ಕೆ ಸಹ ಆಧಾರ ಇಲ್ಲ ಎಂದು ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಎ.ಎಂ. ಸಿಂಘ್ವಿ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT