ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆ ಮುಖ್ಯಸ್ಥರ ಜತೆ ಮಿಗ್–21ರಲ್ಲಿ ಹಾರಾಟ ನಡೆಸಿದ ಅಭಿನಂದನ್

Last Updated 2 ಸೆಪ್ಟೆಂಬರ್ 2019, 9:27 IST
ಅಕ್ಷರ ಗಾತ್ರ

ನವದೆಹಲಿ:ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್‌–16 ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಸೋಮವಾರ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಜತೆ ಮಿಗ್–21 ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

‘ಅಭಿನಂದನ್ ಮತ್ತು ಧನೋವಾ ಇದ್ದ ಮಿಗ್–21 ಯುದ್ಧವಿಮಾನ ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆಯಿಂದ ಹಾರಾಟ ನಡೆಸಿದೆ. ಸಂಪೂರ್ಣ ವೈದ್ಯಕೀಯ ತಪಾಸಣೆ ಬಳಿಕ ಅಭಿನಂದನ್ ಅವರು ವಿಮಾನ ಹಾರಾಟ ನಡೆಸಬಹುದು ಎಂದುಕಳೆದ ತಿಂಗಳು ಪ್ರಮಾಣ ಪತ್ರ ನೀಡಲಾಗಿತ್ತು’ ಎಂದು ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು 30 ನಿಮಿಷ ಹಾರಾಟ ನಡೆಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ವೈದ್ಯಕೀಯ ಪ್ರಮಾಣ ಪತ್ರ ದೊರೆತ ಬಳಿಕ ಅಭಿನಂದನ್ ಅವರು ಆಗಸ್ಟ್‌ನಲ್ಲಿ ವಿಮಾನ ಹಾರಾಟ ಆರಂಭಿಸಿದ್ದಾರೆ.ಬೆಂಗಳೂರಿನಲ್ಲಿರುವ ಭಾರತೀಯ ವಾಯುಪ್ರದೇಶ ವೈದ್ಯಕೀಯ ಸಂಸ್ಥೆಯು ಅಭಿನಂದನ್ ಅವರ ಸಮಗ್ರ ಪರೀಕ್ಷೆ ನಡೆಸಿತ್ತು. ಅವರು ಯುದ್ಧ ವಿಮಾನ ಹಾರಿಸಲು ಸಮರ್ಥರಿದ್ದಾರೆ ಎಂದು ಪ್ರಮಾಣಪತ್ರವನ್ನು ನೀಡಿತ್ತು.

ಬಾಲಾಕೋಟ್‌ ಮೇಲೆ ಫೆ. 26ರಂದು ವಾಯು ದಾಳಿ ನಡೆಸಲಾಗಿತ್ತು. ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬಳಿಕ ಅಭಿನಂದನ್‌ ಚಲಾಯಿಸುತ್ತಿದ್ದ ಮಿಗ್‌–21 ಬೈಸನ್‌ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು.ಪ್ಯಾರಾಚೂಟ್‌ ಮೂಲಕ ಹೊರಕ್ಕೆ ಜಿಗಿದಿದ್ದ ಅಭಿನಂದನ್‌ ಅವರು ಗಾಯಗೊಂಡಿದ್ದರು.

ಪಾಕಿಸ್ತಾನ ನೆಲದಲ್ಲಿ ಇಳಿದಿದ್ದ ಅವರನ್ನು ಅಲ್ಲಿನ ಪಡೆಯು ಫೆ. 27ರಂದು ಬಂಧಿಸಿತ್ತು. ಅ‌ವರ ಬಂಧನದ ಬಳಿಕ ಭಾರತ–ಪಾಕಿಸ್ತಾನದ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಾರ್ಚ್‌ 1ರಂದು ರಾತ್ರಿ ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿತ್ತು.

ಪಾಕಿಸ್ತಾನದೊಳಗೆ ಇರುವ ಬಾಲಾಕೋಟ್‌ನ ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಶಿಬಿರಗಳ ಮೇಲೆ ಭಾರತದ ವಾಯುಪಡೆಯ ವಿಮಾನಗಳು ಬಾಂಬ್‌ ದಾಳಿ ನಡೆಸಿದ್ದವು. ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಪುಲ್ವಾಮಾ ದಾಳಿಯ ಎರಡು ವಾರ ಬಳಿಕ ಭಾರತದ ವಾಯುಪಡೆ ಈ ಕ್ರಮ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT