ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಷೇಕ್ ಬ್ಯಾನರ್ಜಿ ಪತ್ನಿ ವಿದೇಶ ಪ್ರವಾಸ ತಡೆದ ‌ಅಧಿಕಾರಿಗಳು

Published 5 ಜೂನ್ 2023, 10:00 IST
Last Updated 5 ಜೂನ್ 2023, 10:00 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಯುಎಇಗೆ ತೆರಳುತ್ತಿದ್ದ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರ ವಿಮಾನ ಪ್ರಯಾಣಕ್ಕೆ ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ತಡೆಯೊಡ್ಡಿದೆ’ ಎಂದು ರುಜಿರಾ ಪರ ವಕೀಲರು ತಿಳಿಸಿದ್ದಾರೆ.

ರುಜಿರಾ ವಿರುದ್ಧ ಇ.ಡಿಯು ಲುಕ್‌ಔಟ್ ನೋಟಿಸ್ ಹೊರಡಿಸಿದ್ದು, ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. 


ಮೂಲಗಳ ಪ್ರಕಾರ, ಯುಇಎಗೆ ವಿಮಾನದ ಮೂಲಕ ತೆರಳಲು ರುಜಿರಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಿಗ್ಗೆ 7ಗಂಟೆಗೆ ತಲುಪಿದ್ದರು ಎನ್ನಲಾಗಿದೆ. 

‘ಪ್ರಕರಣವೊಂದರಲ್ಲಿ ಇ.ಡಿ ಹೊರಡಿಸಿದ್ದ ಲುಕ್ಔಟ್ ನೋಟಿಸ್ ಅನ್ನು ಉಲ್ಲೇಖಿಸಿ ರುಜಿರಾ ಅವರಿಗೆ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ (ಇಮಿಗ್ರೇಷನ್) ತಡೆಯೊಡ್ಡಲಾಯಿತು. ಅವರ ವಿದೇಶ ಭೇಟಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ’ ಎಂದು ರುಜಿರಾ ಪರ ವಕೀಲರು ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

‘ತಮ್ಮ ಯುಎಇ ಪ್ರವಾಸದ ವಿವರ ಕುರಿತು ರುಜಿರಾ ಅವರು ಶನಿವಾರವೇ ಇ.ಡಿಗೆ ಮಾಹಿತಿ ನೀಡಿದ್ದರು. ಅಲ್ಲದೇ, ವಿಮಾನ ಟಿಕೆಟ್‌ಗಳ ಪ್ರತಿಯನ್ನೂ ಒದಗಿಸಿದ್ದರು. ಆದರೆ, ಸೋಮವಾರ ಅವರ ಪ್ರಯಾಣಕ್ಕೆ ತಡೆಯೊಡ್ಡಲಾಗಿದೆ. ಜೂನ್ 8ರಂದು ಕೋಲ್ಕತ್ತದ ಇ.ಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಿ, ಜೂನ್ 5ನೇ ತಾರೀಖಿನ ಸಮನ್ಸ್ ಪ್ರತಿಯನ್ನು ಅವರಿಗೆ ಹಸ್ತಾಂತರಿಸಲಾಗಿದೆ. ಅವರೀಗ ಮನೆಗೆ ಮರಳಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ರುಜಿರಾ ಅವರ ಪ್ರಯಾಣಕ್ಕೆ ತಡೆಯೊಡ್ಡಿದ್ದರ ಕುರಿತು ಇ.ಡಿ ಅಧಿಕಾರಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


‘ಬ್ಯಾನರ್ಜಿ ದಂಪತಿಗೆ ವಿದೇಶ ಪ್ರಯಾಣಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ ಸುಪ್ರೀಂ ಕೋರ್ಟ್ ಅದೇಶ ನೀಡಿದೆ. ಕಳೆದ ಅ. 5ರಿಂದ 18ರವರೆಗೆ ರುಜಿರಾ ಅಮೆರಿಕಕ್ಕೆ ತೆರಳಿದ್ದರು. ಆಗ ಇ.ಡಿ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ’ ಎಂದು ರುಜಿರಾ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

‘ಇ.ಡಿ ವಿಚಾರಣೆ ನಡೆಯುತ್ತಿರುವಾಗಲೇ ರುಜಿರಾ ಅವರ ವಿದೇಶ ಪ್ರಯಾಣಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸಿರಲಿಲ್ಲ. ಕಳೆದ ವರ್ಷ ಜೂನ್‌ನಲ್ಲಿ ಮಾತ್ರ ಒಂದು ಬಾರಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ. ಅವರು ವಿಚಾರಣೆಗೆ ಹಾಜರಾಗಿದ್ದರು’ ಎಂದೂ ಪ್ರಕಟಣೆ ತಿಳಿಸಿದೆ. 

ಕಳೆದ ವರ್ಷ ಕಲ್ಲಿದ್ದಲು ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ರುಜಿರಾ ಅವರನ್ನು ಇ.ಡಿ ಪ್ರಶ್ನಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಸಿಬಿಐ ಕೂಡಾ ಅವರನ್ನು ವಿಚಾರಣೆಗೊಳಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT