ಥಾಣೆ: ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ (ಯುಬಿಟಿ) ನಾಯಕ ವಿನೋದ್ ಘೋಸಲ್ಕರ್ ಅವರ ಪುತ್ರ ಅಭಿಷೇಕ್ ಹತ್ಯೆ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್ ಶುಕ್ರವಾರ ಆಘಾತ ವ್ಯಕ್ತಪಡಿಸಿದ್ದಾರೆ. ಯುಬಿಟಿಯಲ್ಲಿ ನಡೆಯುತ್ತಿರುವ 'ಗ್ಯಾಂಗ್‌ವಾರ್' ಈ ಕೃತ್ಯಕ್ಕೆ ಕಾರಣ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಅಭಿಷೇಕ್ ಅವರನ್ನು ಗುರುವಾರ 'ಫೇಸ್‌ಬುಕ್ ಲೈವ್' ವೇಳೆ ಗುಂಡಿಕ್ಕಿ ಹತ್ಯೆ ಮಾಡಿದ್ದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮೌರಿಸ್ ನೊರೊನ್ಹಾ ಎಂಬಾತ ನಂತರ ತಾನೂ ಗುಂಡು ಹೊಡೆದುಕೊಂಡಿದ್ದ.
ಬೋರಿವಾಲಿ ಉಪನಗರದಲ್ಲಿರುವ ಮೌರಿಸ್ ಕಚೇರಿಯಲ್ಲಿ ನಡೆದ ಈ ಪ್ರಕರಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮಾಜಿ ಕಾರ್ಪೊರೇಟರ್ ಆಗಿರುವ ಅಭಿಷೇಕ್ ಅವರ ಕಿಬ್ಬೊಟ್ಟೆ ಮತ್ತು ಭುಜಕ್ಕೆ ಗುಂಡು ಬಿದ್ದಿತ್ತು.
ಪ್ರತಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಾಮಂತ್, ರಾಜಕೀಯ ಶತ್ರುವಾಗಿದ್ದರೂ ಸರಿ, ಯಾರೂ ಈ ರೀತಿ ಪ್ರಾಣ ಕಳೆದುಕೊಳ್ಳಬಾರದು ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯುಬಿಟಿಯ ಹಿರಿಯ ನಾಯಕರೊಂದಿಗೆ ಮೌರಿಸ್ ನಿಕಟ ಸಂಪರ್ಕ ಹೊಂದಿದ್ದ ಎಂದಿರುವ ಸಚಿವರು, ಮೌರಿಸ್ ಮತ್ತು ಯುಬಿಟಿಯ ನಾಯಕರು ಜೊತೆಗಿರುವ ಚಿತ್ರಗಳು ಶಿವಸೇನಾದ ಮುಖವಾಣಿ 'ಸಾಮ್ನಾ'ದಲ್ಲಿ ಪ್ರಕಟವಾಗಿರುವುದನ್ನು ಪ್ರದರ್ಶಿಸಿದರು.
ಮೌರಿಸ್ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಭೇಟಿಯಾಗಿದ್ದ ಎಂದು ಯುಬಿಟಿ ನಾಯಕ ಸಂಜಯ್ ರಾವುತ್ ಆರೋಪಿಸಿರುವುದಕ್ಕೆ ತಿರುಗೇಟು ನೀಡಿರುವ ಸಾಮಂತ್, ಇದು 'ಕಿಡಿಗೇಡಿತನದ ಹೇಳಿಕೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಅಭಿಷೇಕ್ ಹಾಗೂ ಮೌರಿಸ್ ನಡುವಣ ಸಂಭಾಷಣೆಯನ್ನು ಉಲ್ಲೇಖಿಸಿದ ಸಾಮಂತ್, ಯುಬಿಟಿಯ ಇಬ್ಬರು ನಾಯಕರು ಯೋಜನೆಗಳನ್ನು ರೂಪಿಸುತ್ತಿರುವ ಸಂದರ್ಭದಲ್ಲಿ, ಶಿವಸೇನೆಯ ಪಾತ್ರ ಏನಿರುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಹತ್ಯೆ ಸಂಬಂಧ ಸಮಗ್ರ ತನಿಖೆ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.