ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ ಬಿಷ್ಣೋಯಿ ಗ್ಯಾಂಗ್‌ನ ಬಾಡಿಗೆ ಬಂಟರು: ಪೊಲೀಸ್

Published 16 ಏಪ್ರಿಲ್ 2024, 9:49 IST
Last Updated 16 ಏಪ್ರಿಲ್ 2024, 9:49 IST
ಅಕ್ಷರ ಗಾತ್ರ

ಮುಂಬೈ: ‘ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸೇರಿದ ಮುಂಬೈ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ಗುಂಡು ಹಾರಿಸಿದವರು, ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಬಾಡಿಗೆ ಬಂಟರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಗುಜರಾತ್‌ನ ಕಚ್‌ ಪಶ್ಚಿಮ ವಿಭಾಗದ ಡಿಐಜಿ ಮಹೇಂದ್ರ ಬಗಾದಿಯಾ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಗುಂಡು ಹಾರಿಸಿದ ಆರೋಪಿಗಳಾದ ವಿಕ್ಕಿ ಗುಪ್ತಾ (24) ಹಾಗೂ ಸಾಗರ್ ಪಾಲ್ (21) ಎಂಬುವವರನ್ನು ಗುಜರಾತ್‌ನ ಮಾತಾ ನೊ ಮಾಡ್‌ ಎಂಬಲ್ಲಿ ಬಂಧಿಸಲಾಗಿದೆ. 

‘ಬಿಷ್ಣೋಯಿ ಗ್ಯಾಂಗ್‌ ಜೊತೆ ವಿಕ್ಕಿ ಸಂಪರ್ಕದಲ್ಲಿದ್ದ. ಆದರೆ ಸಲ್ಮಾನ್ ಖಾನ್ ಮನೆ ಮೇಲೆ ಗುಂಡು ಹಾರಿಸಿದವನು ಸಾಗರ್. ಆರೋಪವನ್ನು ಈ ಇಬ್ಬರೂ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ಧಾರೆ.

‘ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸೇರಿದ ಬಾಂದ್ರಾದಲ್ಲಿರುವ ಮನೆ ಮೇಲೆ ಗುಂಡು ಹಾರಿಸುವ ಮೊದಲು ಆರೋಪಿಗಳು ಬೈಕ್‌ನಲ್ಲಿ ರೇಸಿಂಗ್ ನಡೆಸಿದ್ದರು. ವಿಕ್ಕಿ ಮೋಟಾರು ಸೈಕಲ್ ಓಡಿಸುತ್ತಿದ್ದ. ಹಿಂಬದಿ ಕೂತಿದ್ದ ಸಾಗರ್, ನಟ ಖಾನ್ ಮನೆ ಮೇಲೆ ಗುಂಡು ಹಾರಿಸಿದ್ದ. ಬಂಧಿತರನ್ನು ವಿಮಾನ ಮೂಲಕ ಮಂಗಳವಾರ ಬೆಳಿಗ್ಗೆ ಮುಂಬೈಗೆ ಕರೆತರಲಾಗಿದೆ. ವೈದ್ಯಕೀಯ ತಪಾಸಣೆ ನಂತರ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ಏ. 25ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ’ ಎಂದು ಮುಂಬೈನ ಜಂಟಿ ಪೊಲೀಸ್ ಆಯುಕ್ತರಾದ ಲಕ್ಷ್ಮಿ ಗೌತಮ್ ತಿಳಿಸಿದ್ದಾರೆ.

‘ಸಲ್ಮಾನ್ ಖಾನ್ ಮನೆ ಸುತ್ತ ಮೂರು ಬಾರಿ ಆರೋಪಿಗಳು ಬೈಕ್‌ನಲ್ಲಿ ಸುತ್ತಿದ್ದರು. ನಂತರ ಐದು ಸುತ್ತು ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಂದು ಗುಂಡು ಸಲ್ಮಾನ್ ಖಾನ್ ಮನೆ ಗೋಡೆಗೆ ತಗುಲಿದೆ. ಮತ್ತೊಂದು ಗುಂಡು ಖಾನ್ ಅವರ ಮನೆಯ ಗ್ಯಾಲರಿಗೆ ಹಾನಿ ಮಾಡಿದೆ’ ಎಂದಿದ್ದಾರೆ.

'ಈ ನಡುವೆ ಸಲ್ಮಾನ್ ಖಾನ್ ಮನೆ ಮೇಲಿನ ದಾಳಿಯ ಹಿಂದೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯಿ ಅವರ ಕೈವಾಡವಿದೆ ಎಂಬ ಫೇಸ್‌ಬುಕ್ ಪೋಸ್ಟ್‌ ಆಧಾರದಲ್ಲೂ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕವಾಗಿ ಕೃತ್ಯದಲ್ಲಿ ಅನ್ಮೋಲ್ ಅವರ ಕೈವಾಡದ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT