ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್: ನಕಲಿ ಸರ್ಕಾರಿ ಕಚೇರಿ, ಟೋಲ್ ಪ್ಲಾಜಾ ನಂತರ ಇದೀಗ ನಕಲಿ ಆಸ್ಪತ್ರೆ ಪತ್ತೆ

ಸತೀಶ್ ಜಾ
Published 11 ಜುಲೈ 2024, 10:21 IST
Last Updated 11 ಜುಲೈ 2024, 10:21 IST
ಅಕ್ಷರ ಗಾತ್ರ

ಅಹಮದಾಬಾದ್: ನಕಲಿ ಸರ್ಕಾರಿ ಕಚೇರಿ ಮತ್ತು ನಕಲಿ ಟೋಲ್ ಪ್ಲಾಜಾ ಪತ್ತೆಯಾದ ಬೆನ್ನಲ್ಲೇ, ಬಾಲಕಿಯೊಬ್ಬಳ ಸಾವಿನ ನಂತರ ನಕಲಿ ಆಸ್ಪತ್ರೆ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಕರಣ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತ್ತೆಯಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡವು ಅಹಮದಾಬಾದ್‌ನಲ್ಲಿ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ, ಬಾವಲಾ ತಾಲ್ಲೂಕಿನ ಕೆರಾಲಾ ಎಂಬ ಗ್ರಾಮದಲ್ಲಿ ‘ಅನನ್ಯಾ ಮಲ್ಟಿ ಸ್ಪೆಷಾಲಿಟಿ‘ ಎಂಬ ನಕಲಿ ಆಸ್ಪತ್ರೆಯನ್ನು ಪತ್ತೆ ಮಾಡಿತು. ಈ ಆಸ್ಪತ್ರೆಯು ಅನ್ಯ ವೈದ್ಯರೊಬ್ಬರ ಹೆಸರಿನಲ್ಲಿ ನೋಂದಣಿಯಾಗಿದೆ. ನಕಲಿ ವೈದ್ಯಕೀಯ ಸಿಬ್ಬಂದಿ ಈ ಆಸ್ಪತ್ರೆಯನ್ನು ನಡೆಸುತ್ತಿದ್ದುದು ಕಂಡುಬಂದ ಹಿನ್ನೆಲೆಯಲ್ಲಿ ಇದಕ್ಕೆ ಬೀಗ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ, ಮೂತ್ರರೋಗ ವಿಭಾಗ, ಚರ್ಮರೋಗ ಹಾಗೂ ಇನ್ನಿತರ ಹತ್ತು ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿತ್ತು. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿರುವ ಫಲಕ ಅಳವಡಿಸಲಾಗಿದೆ. 

ಬಾಲಕಿಯೊಬ್ಬಳ ಸಾವಿನ ನಂತರ ಅವರ ಕುಟುಂಬಸ್ಥರು ಇಲ್ಲಿನ ವ್ಯವಸ್ಥೆ ಕುರಿತು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಬಾಲಕಿಯನ್ನು ಈ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಆಕೆಯ ಆರೋಗ್ಯ ಅಷ್ಟಾಗಿ ಹದಗೆಟ್ಟಿರಲಿಲ್ಲ. ಆದರೆ ಅಲ್ಲಿನ ನಕಲಿ ಸಿಬ್ಬಂದಿ ನೀಡಿದ ಚಿಕಿತ್ಸೆಯ ನಂತರ ಬಾಲಕಿಯ ಆರೋಗ್ಯ ಬಿಗಡಾಯಿಸಿತು. ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಅಲ್ಲಿನ ಸಿಬ್ಬಂದಿ ಹೇಳಿದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

₹1.5 ಲಕ್ಷ ಶುಲ್ಕ ವಸೂಲು ಮಾಡಿದ ಅನನ್ಯಾ ಆಸ್ಪತ್ರೆಯ ಸಿಬ್ಬಂದಿ, ಬಾಲಕಿಯ ಆರೋಗ್ಯ ಸ್ಥಿತಿ ಕುರಿತ ಬಿಡುಗಡೆ ಪತ್ರವನ್ನು ನೀಡಲು ನಿರಾಕರಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಹಮದಾಬಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾ, ‘ಬಾಲಕಿಯ ಸಾವಿನ ಕುರಿತು ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ಜತೆಗೆ ನಕಲಿ ಆಸ್ಪತ್ರೆ ಹಾಗೂ ವೈದ್ಯರ ಕುರಿತೂ ದೂರುಗಳು ಬಂದಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT