ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳ: ಮುಷ್ಕರ ಭಾಗಶಃ ಕೈಬಿಡಲು ಕಿರಿಯ ವೈದ್ಯರ ನಿರ್ಧಾರ

Published : 20 ಸೆಪ್ಟೆಂಬರ್ 2024, 0:32 IST
Last Updated : 20 ಸೆಪ್ಟೆಂಬರ್ 2024, 0:32 IST
ಫಾಲೋ ಮಾಡಿ
Comments

ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರವು ತಮ್ಮ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿರುವುದರಿಂದ ಮುಷ್ಕರವನ್ನು ಭಾಗಶಃ ಕೈಬಿಡಲು ಕಿರಿಯ ವೈದ್ಯರು ಗುರುವಾರ ನಿರ್ಧರಿಸಿದ್ದಾರೆ. ತುರ್ತು ಮತ್ತು ಅಗತ್ಯ ಸೇವೆಗಳ‌ನ್ನು ನೀಡುವ ಕೆಲಸ ಶನಿವಾರ ಆರಂಭಿಸಲಿದ್ದಾರೆ.

ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ– ಕೊಲೆ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ಕಳೆದ 41 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.

‘ಪಶ್ಚಿಮ ಬಂಗಾಳದ ಪ್ರವಾಹ ಪರಿಸ್ಥಿತಿಯನ್ನು ಮನಗಂಡು ಮತ್ತು ರಾಜ್ಯ ಸರ್ಕಾರ ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಿರುವುದರಿಂದ ಮುಷ್ಕರವನ್ನು ಭಾಗಶಃ ಹಿಂಪಡೆಯುತ್ತಿದ್ದೇವೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಒಪಿಡಿ (ಹೊರ ರೋಗಿ ವಿಭಾಗ) ಕೆಲಸ ಆರಂಭಿಸುವುದಿಲ್ಲ’ ಎಂದು ಗುರುವಾರ ನಡೆದ ಸಭೆಯ ಬಳಿಕ ವೈದ್ಯರು ತಿಳಿಸಿದ್ದಾರೆ.

‘ಸ್ವಾಸ್ಥ್ಯ ಭವನದ (ಆರೋಗ್ಯ ಇಲಾಖೆಯ ಕೇಂದ್ರ ಕಚೇರಿ) ಮುಂದೆ ನಡೆಸುತ್ತಿರುವ ಧರಣಿಯನ್ನು ಕೈಬಿಡುತ್ತೇವೆ. ಸ್ವಾಸ್ಥ್ಯ ಭವನದಿಂದ ಸಿಬಿಐ ಕಚೇರಿಗೆ ಶುಕ್ರವಾರ ಮೆರವಣಿಗೆ ನಡೆಯಲಿದೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಒಂದು ವಾರ ಕಾಯುತ್ತೇವೆ. ಸರ್ಕಾರ ತನ್ನ ಮಾತು ತಪ್ಪಿದರೆ ಮತ್ತೆ ಮುಷ್ಕರ ಆರಂಭಿಸುತ್ತೇವೆ’ ಎಂದಿದ್ದಾರೆ.

ನಿರ್ದೇಶನಗಳ ಪಟ್ಟಿ ಬಿಡುಗಡೆ: ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ, ಭದ್ರತೆ ಮತ್ತು ಕೆಲಸದ ಸ್ಥಳದಲ್ಲಿ ಅವರಿಗೆ ಅನುಕೂಲಕರ ವಾತಾವರಣ ಖಾತರಿಪಡಿಸುವುದಕ್ಕೆ ಸಂಬಂಧಿಸಿದ ನಿರ್ದೇಶನಗಳ ಪಟ್ಟಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್‌ ಪಂತ್‌ ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ನಿಗಮ್‌ ಅವರಿಗೆ ಬರೆದ ಪತ್ರದಲ್ಲಿ, ‘ಆಸ್ಪತ್ರೆಗಳಲ್ಲಿ ವೈದ್ಯರ ಕರ್ತವ್ಯಕ್ಕೆ ಸಾಕಷ್ಟು ಕೊಠಡಿಗಳು, ಶೌಚಾಲಯಗಳು, ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು ಕುಡಿಯುವ ನೀರಿನ ಸೌಲಭ್ಯ’ ಒದಗಿಸುವುದೂ ಸೇರಿದಂತೆ 10 ನಿರ್ದೇಶನಗಳನ್ನು ಹೊರಡಿಸಿದ್ದಾರೆ.

ಸಂತ್ರಸ್ತೆಯ ತಂದೆಯಿಂದ ಸಿಬಿಐಗೆ ಪತ್ರ: ಮಗಳ ಜತೆಗೆ ನಡೆಸಿದ ಕೊನೆಯ ಸಂಭಾಷಣೆಯ ಆಡಿಯೊವನ್ನು ಸಂರಕ್ಷಿಸಿಡುವಂತೆ ಕೋರಿ, ಸಂತ್ರಸ್ತೆಯ ತಂದೆ ಸಿಬಿಐಗೆ ಪತ್ರ ಬರೆದಿದ್ದಾರೆ.

ನೋಂದಣಿ ರದ್ದು: ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರ ವೈದ್ಯಕೀಯ ನೋಂದಣಿಯನ್ನು ಪಶ್ಚಿಮ ಬಂಗಾಳ ವೈದ್ಯಕೀಯ ಪರಿಷತ್ತು ಗುರುವಾರ ರದ್ದುಗೊಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT