ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳ | ವೈದ್ಯರ ಪಟ್ಟು, ನಡೆಯದ ಸಭೆ: ಮುಂದುವರಿದ ಮುಷ್ಕರ

Published : 14 ಸೆಪ್ಟೆಂಬರ್ 2024, 16:23 IST
Last Updated : 14 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಕೋಲ್ಕತ್ತ: ಮಾತುಕತೆಯ ನೇರ ಪ್ರಸಾರ ಮಾಡಬೇಕು ಎಂಬ ಪಟ್ಟನ್ನು ಕಿರಿಯ ವೈದ್ಯರು ಸಡಿಲಿಸದ ಪರಿಣಾಮ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಶನಿವಾರ ನಿಗದಿತ ಸಮಯಕ್ಕೆ ಸಭೆ ನಡೆಯಲಿಲ್ಲ. ಇದರಿಂದ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಮುಂದುವರಿದಿದೆ.

ಇಲ್ಲಿನ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್‌ 9ರಂದು ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣದ ಕಾರಣಕ್ಕೆ ವೈದ್ಯರು ಪ್ರತಿಭಟಿಸುತ್ತಿದ್ದಾರೆ.

ಮುಖ್ಯಮಂತ್ರಿ ಅವರ ನಿವಾಸದಲ್ಲಿ ಶನಿವಾರ ಸಂಜೆ 6ಕ್ಕೆ ಸಭೆ ನಿಗದಿಯಾಗಿತ್ತು. ಮಮತಾ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಿದ್ದರು. 30 ಮಂದಿಯಿದ್ದ ವೈದ್ಯರ ನಿಯೋಗ ಸಂಜೆ 6.45ರ ವೇಳೆಗೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ತಲುಪಿತು. ಆದರೆ ರಾತ್ರಿಯವರೆಗೂ ಸಭೆ ಆರಂಭವಾಗಲಿಲ್ಲ.

ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂಬ ಬೇಡಿಕೆಯಿಂದ ವೈದ್ಯರು ಹಿಂದೆ ಸರಿಯದೇ ಇದ್ದುದು ಸಭೆ ನಿಗದಿಯ ಸಮಯಕ್ಕೆ ಆರಂಭವಾಗದಿರಲು ಕಾರಣ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಅವರು ಡಿಜಿಪಿ ರಾಜೀವ್‌ ಕುಮಾರ್‌ ಹಾಗೂ ಮುಖ್ಯ ಕಾರ್ಯದರ್ಶಿ ಮನೋಜ್‌ ಪಂತ್ ಅವರೊಂದಿಗೆ ಸಭೆಗಾಗಿ ಕಾದು ಕುಳಿತ ಫೋಟೊವನ್ನು ಸಚಿವಾಲಯ ಬಿಡುಗಡೆಗೊಳಿಸಿದೆ.

‘ಎಲ್ಲರೂ ಒಳಗೆ ಬಂದು ಸಭೆಗೆ ಹಾಜರಾಗುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ. ಈ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಸಭೆಯನೇರ ಪ್ರಸಾರ ಸಾಧ್ಯವಿಲ್ಲ. ಸಭೆಯ ವಿಡಿಯೊ ರೆಕಾರ್ಡ್‌ ನಾವೇ ಮಾಡಿ, ಸುಪ್ರೀಂ ಕೋರ್ಟ್‌ ಅನುಮತಿ ಪಡೆದ ಬಳಿಕ ನಿಮಗೆ ನೀಡುತ್ತೇವೆ’ ಎಂದು ಮಮತಾ ಅವರು ವೈದ್ಯರಿಗೆ ಮನವಿ ಮಾಡಿದರು.

‘ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ನೀವು ಹೇಳಿದ್ದೀರಿ. ಆದ್ದರಿಂದ ನಾನು ಕಾಯುತ್ತಿದ್ದೇನೆ. ನನ್ನನ್ನು ಯಾಕೆ ಈ ರೀತಿ ಅವಮಾನಿಸುತ್ತಿದ್ದೀರಿ? ಈ ಹಿಂದೆ ಮೂರು ಸಲ ನಾನು ನಿಮಗಾಗಿ ಕಾದು ಕುಳಿತಿದ್ದೆ. ಅದರೆ ನೀವು ಸಭೆಗೆ ಬರಲಿಲ್ಲ. ದಯವಿಟ್ಟು ಅವಮಾನಿಸಬೇಡಿ’ ಎಂದು ಕೇಳಿಕೊಂಡರು.

ದಿಢೀರ್‌ ಭೇಟಿ
ಮಮತಾ ಬ್ಯಾನರ್ಜಿ ಅವರು ಕಿರಿಯ ವೈದ್ಯರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ದಿಢೀರ್‌ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದರು. ಪ್ರತಿಭಟನೆನಿರತ ವೈದ್ಯರ ಬೇಡಿಕೆಗಳನ್ನು ಪರಿಶೀಲಿಸುವ ಮತ್ತು ಯಾರಾದರೂ ತಪ್ಪಿತಸ್ಥರು ಎಂಬುದು ಸಾಬೀತಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ‘ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ದೀದಿಯಾಗಿ (ಅಕ್ಕ) ನಿಮ್ಮ ಬಳಿ ಬಂದಿದ್ದೇನೆ. ಬಿಕ್ಕಟ್ಟು ಬಗೆಹರಿಸಲು ನನ್ನ ಕೊನೆಯ ಪ್ರಯತ್ನದ ಭಾಗವಾಗಿ ಇಲ್ಲಿದ್ದೇನೆ. ನಿಮಗೆ ಅನ್ಯಾಯ ಉಂಟಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು. ‘ನೀವು ಪ್ರತಿಭಟನೆ ಆರಂಭಿಸಿದ ದಿನದಿಂದಲೂ ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಏಕೆಂದರೆ, ನೀವು ಬೀದಿಯಲ್ಲಿರುವಾಗ ನಿಮ್ಮ ರಕ್ಷಣೆಗಾಗಿ ನಾನು ಎಚ್ಚರದಿಂದಿರಬೇಕಾಗುತ್ತದೆ’ ಎಂದರು.

ಘೋಷ್‌ ವಿರುದ್ಧ ಅತ್ಯಾಚಾರ, ಕೊಲೆ ಆರೋಪ

ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ವಿರುದ್ಧ ಸಿಬಿಐ ಶನಿವಾರ ಅತ್ಯಾಚಾರ ಮತ್ತು ಕೊಲೆ ಆರೋಪವನ್ನು ಹೊರಿಸಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.

ಸಿಬಿಐ ಕಸ್ಟಡಿಗೆ: ಘೋಷ್‌ ಅವರನ್ನು ತನ್ನ ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು, ಘೋಷ್‌ ಅವರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತು.

ಮತ್ತೊಬ್ಬ ಬಂಧನ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಲ್ಲಿನ ತಾಲಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಭಿಜಿತ್‌ ಮಂಡಲ್‌ ಅವರನ್ನೂ ಸಿಬಿಐ ಬಂಧಿಸಿದೆ ಎಂದರು.

ಈ ಮೂಲಕ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಸಾಕ್ಷ್ಯನಾಶ ಮತ್ತು ಎಫ್‌ಐಆರ್‌ ದಾಖಲಿಸಲು ವಿಳಂಬ ತೋರಿದ ಆರೋಪದ ಮೇಲೆ ಸಿಬಿಐ ಮಂಡಲ್‌ ಅವರನ್ನು ಬಂಧಿಸಲಾಗಿದೆ ಎಂದರು.

ದಾಳಿಗೆ ಸಂಚು ಆರೋಪ: ಸಿಪಿಎಂ ಮುಖಂಡನ ಬಂಧನ
ಪ್ರತಿಭಟನೆನಿರತ ವೈದ್ಯರ ಮೇಲೆ ದಾಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಪಶ್ಚಿಮ ಬಂಗಾಳದ ಸಿಪಿಎಂ ಮುಖಂಡ ಕೊಲಾತನ್‌ ದಾಸ್‌ಗುಪ್ತಾ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತ ಪೊಲೀಸರು ಶನಿವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT