ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ಶಶಿಕಲಾ ಬರಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ಎಐಎಡಿಎಂಕೆ ಸ್ಪಷ್ಟನೆ

Last Updated 31 ಮೇ 2021, 13:00 IST
ಅಕ್ಷರ ಗಾತ್ರ

ಕೃಷ್ಣಗಿರಿ (ತಮಿಳುನಾಡು): ‘ಪಕ್ಷದಿಂದ ಉಚ್ಛಾಟಿತರಾಗಿರುವ ವಿ.ಕೆ. ಶಶಿಕಲಾ ಅವರನ್ನು ಯಾವುದೇ ಕಾರಣಕ್ಕೂ ಪುನಃ ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಎಐಎಡಿಎಂಕೆ ಸೋಮವಾರ ಸ್ಪಷ್ಟಪಡಿಸಿದೆ.

ಭಾನುವಾರ ಪಕ್ಷದ ನಿಷ್ಠಾವಂತ ಕಾರ್ಯಕರ್ತರೊಬ್ಬರ ಜತೆಗೆ ಶಶಿಕಲಾ ಅವರು ಪುನಃ ರಾಜಕಾರಣಕ್ಕೆ ಬರುವುದಾಗಿ ಹೇಳಿದ್ದ ಆಡಿಯೊವೊಂದು ವೈರಲ್ ಆದ ಕಾರಣ, ಸೋಮವಾರ ಎಐಎಡಿಎಂಕೆ ಈ ಕುರಿತು ಸ್ಪಷ್ಟನೆ ನೀಡಿದೆ.

‘ಶಶಿಕಲಾ ಅವರಿಗೆ ಪಕ್ಷದಿಂದ ದೂರವಿರುವಂತೆ ಹೇಳಲಾಗಿದೆ. ಯಾವುದೇ ಸಂದರ್ಭದಲ್ಲೂ ಅವರನ್ನು ಎಐಎಡಿಎಂಕೆಗೆ ಬರಮಾಡಿಕೊಳ್ಳುವುದಿಲ್ಲ. ಅವರನ್ನು ಪಕ್ಷಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳದೇ ಇರುವ ಕುರಿತು ಪಕ್ಷದ ಕಾರ್ಯಕರ್ತರು ಸ್ಪಷ್ಟ ಧೋರಣೆ ತಾಳಿದ್ದಾರೆ’ ಎಂದು ಪಕ್ಷದ ಹಿರಿಯ ನಾಯಕ ಕೆ.ಪಿ. ಮುನುಸಾಮಿ ಅವರು ಸುದ್ದಿಗಾರರಿಗೆ ವೇಪ್ಪನಹಳ್ಳಿಯಲ್ಲಿ ತಿಳಿಸಿದ್ದಾರೆ.‌

ಭಾನುವಾರ ಕಾರ್ಯಕರ್ತರೊಬ್ಬರೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಶಶಿಕಲಾ ಅವರು, ‘ಪಕ್ಷದ ನಿಯಂತ್ರಣವನ್ನು ಮರಳಿ ಪಡೆಯುವ ಕುರಿತು ಮಾತನಾಡಿದ್ದರು. ಪಕ್ಷದ ಹೆಸರು ಮತ್ತು ಪನ್ನೀರ್ ಸೆಲ್ವಂ ಮತ್ತು ಕೆ. ಪಳನಿಸ್ವಾಮಿ ಅವರ ಹೆಸರನ್ನು ಉಲ್ಲೇಖಿಸದೇ, ತಮ್ಮ ನಡುವಿನ ವ್ಯತ್ಯಾಸಗಳು ಮತ್ತು ಒಳನೋಟಗಳ ಬಗ್ಗೆಯೂ ಮಾತನಾಡಿದ್ದ ಶಶಿಕಲಾ, ಪಕ್ಷದ ಹಿತಾಸಕ್ತಿ ಕಾಪಾಡುವಂತೆಯೂ ಕಾರ್ಯಕರ್ತರಿಗೆ ಸಲಹೆ ನೀಡಿದ್ದರು.

ದೂರವಾಣಿ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಮುಖಂಡ ಮುನುಸಾಮಿ ಅವರು, ‘ಶಶಿಕಲಾಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷವು ಅಭಿವೃದ್ಧಿ ಹೊಂದುತ್ತಿದ್ದು, ಇಂಥ ಸಮಯದಲ್ಲಿ ಹೇಗಾದರೂ ಗೊಂದಲ ಸೃಷ್ಟಿಸಲು ಶಶಿಕಲಾ ಅವರು ಇತರರ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರ ಗಮನವನ್ನು ಬೇರೆಡೆಗೆ ತಿರುಗಿಸಿ, ಗೊಂದಲ ಸೃಷ್ಟಿಸುವುದೇ ಅವರ ಉದ್ದೇಶವಾಗಿದೆ. ಆದರೆ,ಈ ಪ್ರಯತ್ನವು ಯಶಸ್ವಿಯಾಗುವುದಿಲ್ಲ. ಪಕ್ಷದ ಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಕಾಲದಿಂದಲೇ ಪಕ್ಷದ ಶಕ್ತಿಯಾಗಿರುವವರು ಅಸಂಖ್ಯಾತ ಕಾರ್ಯಕರ್ತರೇ ಹೊರತು ಶಶಿಕಲಾ ಅವರಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT