ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷಭಾಷಣ ಒಪ್ಪಲಾಗದು: ಸುಪ್ರೀಂ ಕೋರ್ಟ್

ಪ್ರಕರಣಗಳ ಪರಿಶೀಲನೆಗೆ ಸಮಿತಿ ರಚಿಸಲು ಕೇಂದ್ರಕ್ಕೆ ಸೂಚನೆ
Published 12 ಆಗಸ್ಟ್ 2023, 0:52 IST
Last Updated 12 ಆಗಸ್ಟ್ 2023, 0:52 IST
ಅಕ್ಷರ ಗಾತ್ರ

ನವದೆಹಲಿ: ಸೌಹಾರ್ದ ಕಾಯ್ದುಕೊಳ್ಳುವುದು ಎಲ್ಲ ಸಮುದಾಯಗಳ ಹೊಣೆಗಾರಿಕೆಯಾಗಿದೆ. ದ್ವೇಷ ಭಾಷಣವನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದ್ವೇಷ ಭಾಷಣ ಪ್ರಕರಣಗಳ ತನಿಖೆಯ ಕಣ್ಗಾವಲಿಗೆ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು, ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ಪಡೆದು, ಸಮಿತಿಯನ್ನು ರಚಿಸುವ ಕುರಿತು ಆಗಸ್ಟ್ 18ರ ಒಳಗೆ ಮಾಹಿತಿಯನ್ನು ನೀಡುವಂತೆ ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕೆ.ಎಂ. ನಟರಾಜ್ ಅವರಿಗೆ ಸೂಚನೆ ನೀಡಿದೆ. 

ಠಾಣಾಧಿಕಾರಿಗಳಿಂದ ದೂರುಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಮಿತಿಯೊಂದನ್ನು ರಚಿಸುವಂತೆ ಡಿಜಿಪಿಯನ್ನು ಕೇಳಬಹುದು. ದ್ವೇಷ ಭಾಷಣದಲ್ಲಿ ಇದ್ದ ಅಂಶಗಳೇನು, ಭಾಷಣದ ಧ್ವನಿಮುದ್ರಿಕೆಯು ಅಸಲಿಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಬಹುದು ಎಂದು ಕೋರ್ಟ್‌ ಹೇಳಿದೆ. 

ವಿವಿಧ ಹಂತಗಳಲ್ಲಿ ಕಾನೂನಿನ ಗ್ರಹಿಕೆಯ ಸಮಸ್ಯೆ ಇದೆ. ಈ ಕುರಿತು ಜಾಗೃತಿಯ ಅಗತ್ಯಯವೂ ಇದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೇಬೇಕಿದೆ ಮತ್ತು ದ್ವೇಷ ಭಾಷಣವು ಯಾರಿಗೂ ಒಪ್ಪಿತ ಅಲ್ಲವೇ ಅಲ್ಲ ಎಂದು ಪೀಠ ವಿವರಿಸಿದೆ. 

ಕೆಲವು ಸ್ಥಳಗಳಲ್ಲಿ ಯಾವುದೋ ಕಾರಣಕ್ಕಾಗಿ ಕಾನೂನು ಪಾಲನೆ ಆಗುತ್ತಿಲ್ಲ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ಅವರು ಪೀಠಕ್ಕೆ ಹೇಳಿದರು. 

‘ಸೂಕ್ತವಾದ ವ್ಯವಸ್ಥೆಯನ್ನು ಯಾಕೆ ಮಾಡಿಕೊಂಡಿಲ್ಲ’ ಎಂದು ನಟರಾಜ್ ಅವರನ್ನು ಪೀಠವು ಪ್ರಶ್ನಿಸಿದೆ. 

ಎಲ್ಲದಕ್ಕೂ ನ್ಯಾಯಾಲಯಕ್ಕೆ ಬರುವುದು ಪರಿಹಾರ ಅಲ್ಲ. ದ್ವೇಷ ಭಾಷಣವನ್ನು ನಿರ್ವಹಿಸುವುದಕ್ಕೆ ವ್ಯವಸ್ಥೆಯೊಂದು ಬೇಕೇಬೇಕು ಎಂದು ಪೀಠವು ಹೇಳಿದೆ. 

ಸರ್ಕಾರವು ದ್ವೇಷ ಭಾಷಣವನ್ನು ಬೆಂಬಲಿಸುವುದಿಲ್ಲ ಎಂಂದು ನಟರಾಜ್‌ ಅವರು ಹೇಳಿದರು. 

ಹರಿಯಾಣದ ನೂಹ್‌ನಲ್ಲಿ ಕೋಮು ಸಂಘರ್ಷ ನಡೆಯುವುದಕ್ಕೆ ಮೊದಲು ಹಿಂಸೆಗೆ ಕುಮ್ಮಕ್ಕು ನೀಡುವ ರೀತಿಯಲ್ಲಿ ಭಾಷಣ ಮಾಡಲಾಗಿತ್ತು ಎಂದು ಅರ್ಜಿದಾರರಾದ ಪತ್ರಕರ್ತೆ ಶಾಹೀನ್‌ ಅಬ್ದುಲ್ಲಾ ಅವರ ವಕೀಲ ಕಪಿಲ್ ಸಿಬಲ್‌ ಹೇಳಿದರು. 

ವಿಡಿಯೊ ಸೇರಿದಂತೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಡಿಜಿಪಿ ಅವರಿಗೆ ಕೊಡಬಹುದು. ಆದರೆ, ಎಫ್‌ಐಆರ್‌ ದಾಖಲಿಕೆ ಸಮಸ್ಯೆ ಅಲ್ಲ, ನಂತರದ ತನಿಖೆಯ ಪ್ರಗತಿಯೇ ಸಮಸ್ಯೆ ಎಂದು ಸಿಬಲ್‌ ಹೇಳಿದರು.  ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲು ಪೀಠವು ಸಿಬಲ್‌ ಅವರಿಗೆ ಸೂಚಿಸಿತು.

ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ದ್ವೇಷ ಭಾಷಣಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT