ತಿರುವನಂತಪುರ: ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ ಪ್ರಸ್ತಾಪಿಸಿರುವ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯದಆ ಆರೋಪಗಳ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಮಲಯಾಳ ಚಲನಚಿತ್ರ ಕಲಾವಿದರ ಸಂಘ (ಅಮ್ಮಾ) ಒತ್ತಾಯಿಸಿದೆ.
ಪೂರ್ಣ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಸಂತ್ರಸ್ತರ ಗುರುತನ್ನು ಬಹಿರಂಗಪಡಿಸದೇ ವರದಿಯು ಹೊರಬರಬೇಕು ಎಂದು ಅದು ಅಭಿಪ್ರಾಯಪಟ್ಟಿದೆ.
ಒಂದು ವೇಳೆ ಹೇಮಾ ಸಮಿತಿಯ ವರದಿಯ ಆಧಾರದ ಮೇಲೆ ‘ಅಮ್ಮಾ’ದ ಯಾವುದೇ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶ ನೀಡಿದರೆ ಖಂಡಿತವಾಗಿಯೂ ಅಂತಹ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ‘ಅಮ್ಮಾ’ದ ಉಪಾಧ್ಯಕ್ಷ ಜಗದೀಶ್ ಹೇಳಿದ್ದಾರೆ.
ಹೇಮಾ ಸಮಿತಿಯ ವರದಿ ಮತ್ತು ಅದರ ಶಿಫಾರಸುಗಳನ್ನು ಸಂಘವು ಸ್ವಾಗತಿಸುತ್ತದೆ ಎಂದು ಅಮ್ಮಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಹೇಳಿದ್ದಾರೆ. ವರದಿಯಲ್ಲಿ ಉಲ್ಲೇಖಿಸಿರುವ ಎಲ್ಲ ಆರೋಪಗಳ ಬಗ್ಗೆ ಕೂಡ ತನಿಖೆಯಾಗಬೇಕು ಎಂದರು.
ವರದಿ ಸಿದ್ಧಪಡಿಸುವಾಗ ಹೇಮಾ ಸಮಿತಿಯು ‘ಅಮ್ಮಾ’ದ ಮಹಿಳಾ ಕಲಾವಿದೆಯರು ಸೇರಿ ಬಹುತೇಕ ಸದಸ್ಯರನ್ನು ಸಂಪರ್ಕಿಸಲಿಲ್ಲ ಎಂದು ವಿಷಾದಿಸಿದ ಸಿದ್ದಿಕ್, ವರದಿಯಲ್ಲಿ ಉಲ್ಲೇಖಿಸಲಾದ ಕೆಲವು ಪ್ರತ್ಯೇಕ ಘಟನೆಗಳ ಆಧಾರದ ಮೇಲೆ ಇಡೀ ಚಿತ್ರರಂಗವನ್ನು ಕೆಟ್ಟದಾಗಿ ಬಿಂಬಿಸಬಾರದು ಎಂದು ಹೇಳಿದ್ದಾರೆ.