ಅಮರಾವತಿ: ತಿರುಪತಿಯ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಿದ್ದಾರೆ ಎಂಬುದರ ಬಗ್ಗೆ ವ್ಯಗ್ರವಾಗಿರುವ ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ಶುದ್ಧೀಕರಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಲು 11 ದಿನದ ದೀಕ್ಷೆ ತೊಡಲಿದ್ದಾರಂತೆ.
ಈ ವಿಷಯವನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾನುವಾರ ತಿಳಿಸಿದ್ದಾರೆ.
ಗುಂಟೂರು ಜಿಲ್ಲೆಯ ನಂಬೂರಿನ ದಶಾವತಾರ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ವಿಧಿವಿಧಾನಗಳನ್ನು ಅನುಸರಿಸಿ ಪವನ್ ಕಲ್ಯಾಣ್ ಅವರು 11 ದಿನದ ದೀಕ್ಷೆ ತೊಟ್ಟು ಪೂಜೆಗೆ ಕುಳಿತುಕೊಳ್ಳಲಿದ್ದಾರೆ.
‘ಅವರು ಮಾಡಿದ ಪಾಪಗಳನ್ನು ತೊಳೆಯುವಂತೆ ಹಾಗೂ ಧಾರ್ಮಿಕ ಶುದ್ಧೀಕರಣವನ್ನು ಕಲ್ಪಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಪವನ್ ಕಲ್ಯಾಣ್ ಅವರು ತಿಳಿಸಿದ್ದಾರೆ.
ಟಿಟಿಡಿಯ ಉದ್ಯೋಗಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಅಕ್ರಮಗಳನ್ನು ಹೇಗೆ ಸಹಿಸುತ್ತಾರೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವೈಎಸ್‌ಆರ್‌ಸಿಪಿ ಆಡಳಿತದ ಅವಧಿಯಲ್ಲಿ ಕಡಿಮೆ ಬೆಲೆಗೆ ಕಲಬೆರಕೆ ತುಪ್ಪ ಖರೀದಿಸಿ ಲಡ್ಡು ಪ್ರಸಾದ ತಯಾರಿಸುತ್ತಿದ್ದರು. ಹೀಗೆ ತಯಾರದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಕಂಡು ಬಂದಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದಾರೆ. ಈ ಬಗ್ಗೆ ವ್ಯಾಪಕವಾದ ರಾಜಕೀಯ ಸಮರ ಏರ್ಪಟ್ಟಿದೆ. ಇನ್ನೊಂದೆಡೆ ಈ ಘಟನೆ ಭಕ್ತರ ಭಾವನೆಗಳಿಗೆ ನೋವು ತಂದಿದೆ ಎಂದು ಹಲವರು ಆರೋಪಿಸಿದ್ದಾರೆ.