ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುಪತಿ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ: ತನಿಖೆಗೆ ಎಸ್‌ಐಟಿ ರಚನೆ

ಡಿಸಿ.ಎಂ ಪವನ್ ಕಲ್ಯಾಣ್‌ರಿಂದ ಪ್ರಾಯಶ್ಚಿತ್ತ ದೀಕ್ಷೆ
Published : 22 ಸೆಪ್ಟೆಂಬರ್ 2024, 19:17 IST
Last Updated : 22 ಸೆಪ್ಟೆಂಬರ್ 2024, 19:17 IST
ಫಾಲೋ ಮಾಡಿ
Comments

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ತುಪ್ಪ ಖರೀದಿಗೆ ಇದ್ದ ನಿಯಮಗಳ ಬದಲಾವಣೆ ಸೇರಿದಂತೆ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾನುವಾರ ಪ್ರಕಟಿಸಿದರು.  

ಹಿಂದಿನ ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ತುಪ್ಪ ಖರೀದಿಗೆ ಇದ್ದ ಹಲವು ನಿಯಮಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಬದಲಾಯಿಸಲಾಯಿತು ಎಂದು ಆರೋಪಿಸಿದರು.

ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ನಾಯ್ಡು, ತಿರುಪತಿಯ ಲಾಡು ತಯಾರಿಸುವಾಗ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬುದು ಬಹಿರಂಗವಾದ ನಂತರ ಕೋಟ್ಯಂತರ ಮಂದಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದರು.

ಟಿಟಿಡಿ ಮಂಡಳಿಗೆ ಮಾಡುವ ನೇಮಕಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ‘ಜೂಜಿನಂತೆ’ ಆಗಿದ್ದವು. ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಮಂಡಳಿಗೆ ನೇಮಿಸಿರುವ ನಿದರ್ಶನಗಳಿವೆ, ಹಿಂದೂಗಳಲ್ಲದವರಿಗೆ ಮಂಡಳಿಯಲ್ಲಿ ಆದ್ಯತೆ ನೀಡಿದ ನಿದರ್ಶನವೂ ಇದೆ ಎಂದು ನಾಯ್ಡು ಹೇಳಿದರು.

‘ಐಜಿ ಅಥವಾ ಅವರಿಗಿಂತ ಮೇಲಿನ ಹಂತದ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗುತ್ತದೆ. ಅದರ ವರದಿ ಆಧರಿಸಿ ಲಾಡು ಕಲಬೆರಕೆ ಪುನರಾವರ್ತನೆ ಆಗದಂತೆ ಸರ್ಕಾರ ಕಠಿಣ ಕ್ರಮಜರುಗಿಸಲಿದೆ. ಇದರಲ್ಲಿ ರಾಜಿ ಇಲ್ಲ. ಜನರ ಭಾವನೆಗಳ ಜೊತೆ ಆಟವಾಡಲು ಯಾರಿಗೂ ಅಧಿಕಾರವಿಲ್ಲ’ ಎಂದು ತಿಳಿಸಿದರು.

ತಿರುಮಲದ ಶುದ್ಧೀಕರಣಕ್ಕೆ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣ ನಡೆಯಲಿದೆ ಎಂದೂ ಅವರು ತಿಳಿಸಿದರು. ‘ತಾಳೆ ಎಣ್ಣೆಯೇ ದುಬಾರಿ ಆಗಿರುವಾಗ ಯಾರಾದರೂ ತುಪ್ಪವನ್ನು ಕೆ.ಜಿ.ಗೆ ₹319ಕ್ಕೆ ಪೂರೈಸಲು ಹೇಗೆ ಸಾಧ್ಯ’ ಎಂದು ನಾಯ್ಡು ಪ್ರಶ್ನಿಸಿದರು.

ಎಆರ್ ಡೈರಿ ಫುಡ್ಸ್ ಪ್ರೈ.ಲಿ. ಕಂಪನಿ ಜೂನ್ 12ರಿಂದ ತುಪ್ಪ ಪೂರೈಸಲು ಆರಂಭಿಸಿತ್ತು ಎಂದರು.

ರಾಜ್ಯದ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಪ್ರಮಾಣಿತ ವಿಧಿ ವಿಧಾನಗಳನ್ನು ರೂಪಿಸಲು, ಅಲ್ಲಿನ ಸಂಪ್ರದಾಯಗಳನ್ನು ಗೌರವಿಸಲು ವರದಿಯೊಂದನ್ನು ಸಿದ್ಧಪಡಿಸಲು ವೈದಿಕ, ಧಾರ್ಮಿಕ ಮತ್ತು ಆಗಮ ಪಂಡಿತರ ಸಮಿತಿಯನ್ನು ರಚಿಸಲಾಗುವುದು ಎಂದರು.

ಜಗನ್ ಸರ್ಕಾರದ ವಿರುದ್ಧ ನಾಯ್ಡು ಆರೋಪ

* ತುಪ್ಪ ಪೂರೈಸುವವರಿಗೆ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು ಎಂಬ ನಿಯಮ ಇತ್ತು. ಇದನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು, ಒಂದು ವರ್ಷಕ್ಕೆ ಇಳಿಸಿತು.

* ತುಪ್ಪ ಪೂರೈಕೆದಾರರ ವಹಿವಾಟು ₹250 ಕೋಟಿ ಇರಬೇಕು ಎಂಬ ನಿಯಮ ಇತ್ತು. ಇದನ್ನು ₹150 ಕೋಟಿಗೆ ಇಳಿಸಲಾಗಿತ್ತು.

ವರದಿ ಸಲ್ಲಿಸಿದ ಟಿಟಿಡಿ ಇಒ

ಲಾಡು ವಿವಾದಕ್ಕೆ ಸಂಬಂಧಿಸಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲ ರಾವ್, ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.

ಪ್ರಾಥಮಿಕ ವರದಿ ಅಧ್ಯಯನ ಮಾಡಿದ ಬಳಿಕ, ಮುಖ್ಯಮಂತ್ರಿ ನಾಯ್ಡು ಸಮಗ್ರ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಆಹ್ವಾನ: ಅಕ್ಟೋಬರ್‌ 4ರಂದು ತಿರುಮಲದಲ್ಲಿ ನಡೆಯಲಿರುವ ಬ್ರಹ್ಮೋತ್ಸವಕ್ಕೆ ಮುಖ್ಯಮಂತ್ರಿ ನಾಯ್ಡು ಅವರಿಗೆ ಟಿಟಿಡಿ ಭಾನುವಾರ ಆಹ್ವಾನ ನೀಡಿದೆ.

ನಾಯ್ಡುಗೆ ಛೀಮಾರಿ ಹಾಕಿ: ಜಗನದ

ತಿರುಪತಿ ದೇವಸ್ಥಾನದ ಲಾಡು ವಿಚಾರದಲ್ಲಿ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿ ಕೂಡಲೇ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಛೀಮಾರಿ ಹಾಕುವಂತೆ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ ಒತ್ತಾಯಿಸಿದ್ದಾರೆ.

ಈ ವಿಚಾರ ಕುರಿತು ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘ಮುಖ್ಯಮಂತ್ರಿ ನಾಯ್ಡು ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿರುವ ರೆಡ್ಡಿ, ‘ರಾಜಕೀಯ ಲಾಭಕ್ಕಾಗಿ ಕೋಟ್ಯಂತರ ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡುವಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಿರುಪತಿ ದೇವಸ್ಥಾನದ ಲಾಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾಗಿರುವುದಕ್ಕೆ
ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದು ತೀವ್ರ
ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆ
ಯಲ್ಲಿ ಜಗನ್‌ ಮೋಹನ್ ರೆಡ್ಡಿ, ಪ್ರಧಾನಿ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ.

ಪ್ರಸಾದ ತಯಾರಿಸಲು ಬಳಸುವ ತುಪ್ಪವನ್ನು ಸ್ವೀಕರಿಸುವುದಕ್ಕೂ ಮುನ್ನ, ವೆಂಕಟೇಶ್ವರ ದೇವಸ್ಥಾನದ ಕಸ್ಟೋಡಿಯನ್‌ ಆದ ಟಿಟಿಡಿ ಅನುಸರಿಸುವ ವಿಧಾನಗಳನ್ನು ಅವರು ಪತ್ರದಲ್ಲಿ ವಿವರಿಸಿದ್ದು, ‘ನಾಯ್ಡು ಅವರ ಈ ನಡೆ ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಘನತೆ ಕುಂದುಂಟು ಮಾಡಿದೆ’ ಎಂದಿದ್ದಾರೆ.

‘ಈಗ ಉದ್ಭವಿಸಿರುವ ಸನ್ನಿವೇಶದಲ್ಲಿ, ಇಡೀ ರಾಷ್ಟ್ರವೇ ನಿಮ್ಮತ್ತ ಮುಖ ಮಾಡಿದೆ. ಸುಳ್ಳುಗಳನ್ನು ಹಬ್ಬಿಸುತ್ತಿರುವ ನಾಯ್ಡು ಅವರಿಗೆ ಕಠಿಣ ವಾಗ್ದಂಡನೆ ವಿಧಿಸಬೇಕು ಹಾಗೂ ಸತ್ಯವನ್ನು ಜನರಿಗೆ ತಿಳಿಸಬೇಕು’ ಎಂದು ಕೋರಿದರು.

‘ಪ್ರಾಯಶ್ಚಿತ್ತ ದೀಕ್ಷೆ’ ಕೈಗೊಂಡ ಪವನ್

ಹೈದರಾಬಾದ್‌: ಲಾಡು ಕಲಬೆರಕೆಯಾಗಿದೆ ಎಂಬ ಆರೋಪಗಳಿಂದಾಗಿ ತಿರುಮಲ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಿವ ಕಾರಣ, ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು 11 ದಿನಗಳ ‘ಪ್ರಾಯಶ್ಚಿತ್ತ ದೀಕ್ಷೆ’ ಕೈಗೊಂಡಿದ್ದಾರೆ.

ಗುಂಟೂರು ಜಿಲ್ಲೆಯ ನಂಬೂರಿನ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪವನ್‌ ಕಲ್ಯಾಣ್‌ ಅವರು ಭಾನುವಾರ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಈ ‘ದೀಕ್ಷೆ’ ಪಡೆದರು.

‘ಪ್ರಾಯಶ್ಚಿತ್ತ ದೀಕ್ಷೆ’ ಅಂಗವಾಗಿ ಅವರು 11 ದಿನ ಕಠಿಣ ವ್ರತಾಚರಣೆ ನಡೆಸಲಿದ್ದಾರೆ. ಈ ಅವಧಿಯಲ್ಲಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ, ಕ್ಷಮೆ ಕೋರಿ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವರು.

‘ದೀಕ್ಷೆ’ ಕೈಗೊಳ್ಳುವುದಕ್ಕೂ ಮುನ್ನ ಮಾತನಾಡಿದ ಅವರು, ‘ಕಲಬೆರಕೆ ತುಪ್ಪವನ್ನು ಬಳಸಿ ತಯಾರಿಸಿದ್ದ ಲಾಡುಗಳನ್ನು ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಕಳುಹಿಸುವ ಮೂಲಕ ಈ ಹಿಂದಿನ ಸರ್ಕಾರ ದೊಡ್ಡ ತಪ್ಪು ಮಾಡಿದೆ’ ಎಂದರು. ‘ಪ್ರಸಾದವನ್ನು ಕಲಬೆರಕೆ ಮಾಡಲಾಗುತ್ತಿದ್ದರೂ ಟಿಟಿಡಿ ಮಂಡಳಿ ಸದಸ್ಯರು ಹಾಗೂ ಅಲ್ಲಿನ ಹಿಂದೂ ಅಧಿಕಾರಿಗಳು
ಸುಮ್ಮನಿದ್ದದ್ದು ಏಕೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT