ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾದಲ್ಲಿ ಮತ್ತೊಂದು ಗೂಢಚಾರಿ ಪಾರಿವಾಳ ಪತ್ತೆ: ಪೊಲೀಸರಿಂದ ತನಿಖೆ

Last Updated 16 ಮಾರ್ಚ್ 2023, 12:18 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಪುರಿ ಜಿಲ್ಲೆಯಲ್ಲಿ ಶಂಕಿತ ಗೂಢಚಾರಿ ಪಾರಿವಾಳ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಒಂದು ವಾರದಲ್ಲಿ ರಾಜ್ಯದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಮಾರ್ಚ್‌ 8 ರಂದು ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಕರಾವಳಿಯ ಮೀನುಗಾರಿಕಾ ದೋಣಿಯಲ್ಲಿ ಮೊದಲ ಗೂಢಚಾರಿ ಪಾರಿವಾಳವನ್ನು ಸೆರೆ ಹಿಡಿಯಲಾಗಿತ್ತು.

ಇದೀಗ ಪುರಿ ಜಿಲ್ಲೆಯ ಅಸ್ತರಾಂಗ್ ಬ್ಲಾಕ್‌ನ ನಾನ್‌ಪುರ್ ಗ್ರಾಮದಲ್ಲಿ ಬುಧವಾರ ಹೊಸ ಪಾರಿವಾಳವನ್ನು ಸೆರೆಹಿಡಿಯಲಾಗಿದೆ. ಇತರ ಪಾರಿವಾಳಗಳೊಂದಿಗೆ ಬೆರೆಯಲು ಬಂದಾಗ ಸ್ಥಳೀಯರೊಬ್ಬರು ಅದನ್ನು ಹಿಡಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾರಿವಾಳದ ಕಾಲುಗಳಿಗೆ ಹಿತ್ತಾಳೆ ಮತ್ತು ಪ್ಲಾಸ್ಟಿಕ್ ಉಂಗುರಗಳಿಂದ ಟ್ಯಾಗ್‌ಗಳನ್ನು ಜೋಡಿಸಲಾಗಿತ್ತು. ಒಂದು ಟ್ಯಾಗ್‌ನಲ್ಲಿ ‘ರೆಡ್ಡಿ ವಿಎಸ್‌ಪಿ ಡಿಎನ್' ಎಂದು ಕೆತ್ತಲಾಗಿದ್ದು, ಇನ್ನೊಂದು ಟ್ಯಾಗ್‌ನಲ್ಲಿ 31 ಸಂಖ್ಯೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಒಂದು ವಾರದಿಂದ ಪಾರಿವಾಳ ಈ ಪ್ರದೇಶದಲ್ಲಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

‘ನಮ್ಮ ಮನೆಯಲ್ಲಿ ಸಾಕು ಪಾರಿವಾಳಗಳಿದ್ದು, ಈ ಪಾರಿವಾಳವು ನಮ್ಮ ಪಾರಿವಾಳಗಳೊಂದಿಗೆ ಬೆರೆಯಲು ಬಂದಿತ್ತು. ಅದು ಇತರ ಪಾರಿವಾಳಗಳೊಂದಿಗೆ ಮುಕ್ತವಾಗಿ ಬೆರೆಯದೆ ದೂರ ಉಳಿದಿದ್ದರಿಂದ ಅದರಲ್ಲೇನೋ ಒಂದು ವಿಶಿಷ್ಟತೆಯನ್ನು ಕಂಡೆವು. ನಾವು ಅದರ ಕಾಲುಗಳ ಮೇಲೆ ಕೆಲವು ಟ್ಯಾಗ್‌ಗಳನ್ನು ಸಹ ಗಮನಿಸಿದೆವು. ಆದ್ದರಿಂದ ಅದನ್ನು ಹಿಡಿಯಲು ನಿರ್ಧರಿಸಿ, ಮೀನುಗಾರಿಕೆ ಬಲೆ ಬಳಸಿದೆವು’ ಎಂದು ಪಾರಿವಾಳವನ್ನು ಹಿಡಿದ ಬಿಕ್ರಮ್ ಪತಿ ಹೇಳಿದ್ದಾರೆ.

ಈ ಪಾರಿವಾಳವನ್ನೂ ಬೇಹುಗಾರಿಕೆಗೆ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 8ರಂದು ಸಿಕ್ಕಿಬಿದ್ದ ಪಾರಿವಾಳದ ಕಾಲಿಗೆ ಕ್ಯಾಮೆರಾದಂತೆ ಕಾಣುವ ಸಾಧನಗಳು ಮತ್ತು ಮೈಕ್ರೋಚಿಪ್ ಅಳವಡಿಸಲಾಗಿತ್ತು. ಇದನ್ನು ಪರೀಕ್ಷೆಗಾಗಿ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT