ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳಿಂದ ಆಕ್ಷೇಪ; ಯುಸಿಸಿ ವಿಚಾರ ಸಂಕಿರಣ ರದ್ದುಪಡಿಸಿದ ಸೇನೆ

Published 23 ಮಾರ್ಚ್ 2024, 23:30 IST
Last Updated 23 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಶ್ರೀನಗರ: ಭಾರತೀಯ ದಂಡ ಸಂಹಿತೆ ಮತ್ತು ಏಕ ರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಜನರಿಗೆ ಅರಿವು ಮೂಡಿಸಲು ಭಾರತೀಯ ಸೇನೆ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ರದ್ದುಪಡಿಸಲಾಗಿದೆ.

ವಿಚಾರ ಸಂಕಿರಣವನ್ನು ಇದೇ 26ರಂದು ಕಾಶ್ಮೀರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಿಗದಿಪಡಿಸಲಾಗಿತ್ತು. ಶುಕ್ರವಾರ ತಡರಾತ್ರಿ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಯನ್ನು ಸೇನೆ ಕಳುಹಿಸಿತ್ತು. 

ಸೇನೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ ಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದಕ್ಕೆ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆಯು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ಇದರ ಬೆನ್ನಲ್ಲೇ, ‘ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಮಾರ್ಚ್ 26ರಂದು ಕಾಶ್ಮೀರ ಕಾನೂನು ತಜ್ಞರಿಂದ ಕಾನೂನು ಅರಿವು ಮೂಡಿಸಲು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಮಾದರಿ ನೀತಿ ಸಂಹಿತೆ ಜಾರಿಯಿಂದಾಗಿ ರದ್ದುಗೊಳಿಸಲಾಗಿದೆ’ ಎಂದು ಶ್ರೀನಗರದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೋಜ್ ಸಾಹು ಹೇಳಿದ್ದಾರೆ.

ಕಾಶ್ಮೀರದಂತಹ ಸೂಕ್ಷ್ಮ ಸ್ಥಳದಲ್ಲಿ, ಏಕರೂಪ ನಾಗರಿಕ ಸಂಹಿತೆಯಂತಹ ‘ವಿಭಜಕ’ ವಿಷಯದಲ್ಲಿ ಸೇನೆಯ ಒಳಗೊಳ್ಳುವಿಕೆ ಎಷ್ಟು ಸಮಂಜಸ ಎಂದು ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬಿಜೆಪಿಯ ಪ್ರಣಾಳಿಕೆಯಲ್ಲಿನ ವಿಷಯದ ಕುರಿತು ಸೇನೆ ನಡೆಸಲಿರುವ ವಿಚಾರ ಸಂಕಿರಣದ ಔಚಿತ್ಯವನ್ನು ಕೇಂದ್ರ ಚುನಾವಣಾ ಆಯೋಗವೇ ನಿರ್ಣಯಿಸಬೇಕು.
–ತನ್ವಿರ್‌ ಸಾದಿಕ್‌, ಮುಖ್ಯ ವಕ್ತಾರ ನ್ಯಾಷನಲ್‌ ಕಾನ್ಫರೆನ್ಸ್‌
ಇಂತಹ ವಿಚಾರ ಸಂಕಿರಣವನ್ನು ನಡೆಸುವ ಸೇನೆಯ ನಡೆ ಧಾರ್ಮಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸುವಿಕೆ ಜೊತೆಗೆ ಕೆಟ್ಟ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಅಪಾಯಕ್ಕೆ ನಾಂದಿಯಾಗುತ್ತದೆ.
–ಒಮರ್‌ ಅಬ್ದುಲ್ಲಾ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ
ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿ. ಸಂವಿಧಾನವನ್ನು ವ್ಯವಸ್ಥಿತವಾಗಿ ಶಿಥಿಲಗೊಳಿಸುತ್ತಿರುವುದರ ಪ್ರತಿಬಿಂಬವಿದು. ಸೇನೆಯು ಪಕ್ಷಪಾತದ ನಡೆಯ ಜತೆಗೆ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ವ್ಯವಹಾರಗಳಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿದೆ.
–ನಜ್ಮುಸ್‌ ಸಾಕಿಬ್‌, ಪಿಡಿಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT