ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಗುಪ್ತಚರ ಮಾಹಿತಿ ಕೊರತೆ: ಸೇನಾಪಡೆಗಳ ಮುಖ್ಯಸ್ಥ

ಸೇನಾಪಡೆಗಳ ಮುಖ್ಯಸ್ಥ ಪಾಂಡೆ ಹೇಳಿಕೆ
Published 11 ಜನವರಿ 2024, 16:02 IST
Last Updated 11 ಜನವರಿ 2024, 16:02 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಜೌರಿ, ಪೂಂಛ್ ವಲಯದಲ್ಲಿ ಸೇನಾಪಡೆಗಳ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆಳಿಗೆ ‘ಗುಪ್ತಚರ ಮಾಹಿತಿ’ ಕೊರತೆ ಪ್ರಮುಖ ಕಾರಣವಾಗಿದೆ ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಗುರುವಾರ ಹೇಳಿದರು.

ಈ ವಲಯದಲ್ಲಿ ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ಭಯೋತ್ಪಾದಕರ ದಾಳಿ ನಡೆದಿದೆ, ಒಳನುಸುಳುವಿಕೆ ಯತ್ನಗಳು ಕೂಡ ನಡೆದಿವೆ. ಒಂದು ವರ್ಷದಲ್ಲಿ ಒಟ್ಟು 20 ಮಂದಿ ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಮನುಷ್ಯನ ಜಾಣ್ಮೆ ಹಾಗೂ ಸ್ಥಳೀಯರ ಸಹಕಾರ ಬಹಳ ಮುಖ್ಯ. ನಾವು ನಮ್ಮ ಯತ್ನಗಳನ್ನು ಇತರ ಗುಪ್ತಚರ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರ ಜೊತೆ ಸಮನ್ವಯದಿಂದ ಕೈಗೊಳ್ಳುವ ಕೆಲಸ ಮಾಡುತ್ತಿದ್ದೇವೆ’ ಎಂದು ಪಾಂಡೆ ತಿಳಿಸಿದರು. ಸ್ಥಳೀಯರ ಮನಸ್ಸಿನಲ್ಲಿ ಪರಕೀಯ ಮನೋಭಾವ ಬೆಳೆಯದಂತೆ ನೋಡಿಕೊಳ್ಳಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ಪೂಂಛ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೇನೆಯ ವಶದಲ್ಲಿ ಇದ್ದ ನಾಗರಿಕರು ಮೃತಪಟ್ಟ ಘಟನೆಯ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿ ಪಾಂಡೆ ಅವರು, ಸ್ಥಳೀಯರ ಬೆಂಬಲದ ಅಗತ್ಯವನ್ನು ಮನಗಂಡು ಈ ಹಳ್ಳಿಯನ್ನು ಸೇನೆಯು ದತ್ತು ಪಡೆದಿತ್ತು ಎಂದು ಹೇಳಿದರು.

‘ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ಕಳೆದ ಐದಾರು ತಿಂಗಳಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳು ನಮ್ಮ ಕಳವಳಕ್ಕೆ ಕಾರಣವಾಗಿವೆ. 2017–18ರವರೆಗೆ ಇಲ್ಲಿ ಶಾಂತಿ ನೆಲೆಸಿತ್ತು. ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆ ಆಗುತ್ತಿದ್ದುದನ್ನು ಕಂಡು ನಮ್ಮ ವಿರೋಧಿಗಳು ಇಲ್ಲಿ ಭಯೋತ್ಪಾದಕ ಗುಂಪುಗಳಿಗೆ ಉತ್ತೇಜನ ನೀಡುತ್ತಿದ್ದಾರೆ’ ಎಂದು ಅವರು ತಮ್ಮ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದೇಶದ ಉತ್ತರದ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಪಾಂಡೆ ಅವರು, ‘ಪರಿಸ್ಥಿತಿಯು ಸ್ಥಿರವಾಗಿದ್ದರೂ, ಸೂಕ್ಷ್ಮವಾಗಿಯೇ ಉಳಿದಿದೆ’ ಎಂದು ಹೇಳಿದರು. ಚೀನಾದ ಜೊತೆ ನಡೆಯುತ್ತಿರುವ ಮಾತುಕತೆಗಳ ಉದ್ದೇಶವು 2020ರ ಮಧ್ಯಭಾಗದಲ್ಲಿ ಇದ್ದ ಸ್ಥಿತಿಯನ್ನು ಮರುಸ್ಥಾಪಿಸುವುದು ಎಂದರು.

‘ಸೇನಾ ಸಿಬ್ಬಂದಿಯ ಸಂಖ್ಯೆಯನ್ನು ಅಲ್ಲಿ ಕಡಿಮೆ ಮಾಡುವ ವಿಚಾರವು ಇದಾದ ನಂತರ ಮುನ್ನೆಲೆಗೆ ಬರುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT