ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 Summit | 78 ಕಲಾವಿದರ ತಂಡದಿಂದ ಸಂಗೀತದ ರಸದೌತಣ

Published 8 ಸೆಪ್ಟೆಂಬರ್ 2023, 15:53 IST
Last Updated 8 ಸೆಪ್ಟೆಂಬರ್ 2023, 15:53 IST
ಅಕ್ಷರ ಗಾತ್ರ

ನವದೆಹಲಿ: ಜಿ20 ಶೃಂಗಸಭೆಗೆ ಆಗಮಿಸಿರುವ ವಿವಿಧ ದೇಶಗಳ ಗಣ್ಯರಿಗೆ, ದೇಶದ ಶ್ರೀಮಂತ ಸಂಗೀತ ಪರಂಪರೆಯನ್ನು ಪರಿಚಯಿಸಲು ಆತಿಥೇಯ ಭಾರತ ಸಜ್ಜಾಗಿದೆ. ವಿವಿಧ ರಾಜ್ಯಗಳ ಸುಮಾರು 78 ಕಲಾವಿದರು ಸಂಗೀತದ ರಸದೌತಣವನ್ನು ಬಡಿಸಲಿದ್ದಾರೆ. 34 ಹಿಂದೂಸ್ತಾನಿ, 40 ಜನಪದ, 18 ಕರ್ನಾಟಕ ಸಂಗೀತ ವಾದ್ಯಗಳು ಬಳಕೆಯಾಗಲಿವೆ.

ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು ಹಾಗೂ ಆಹ್ವಾನಿತರಾಗಿರುವ ವಿವಿಧ ರಾಷ್ಟ್ರಗಳಿಂದ ಸುಮಾರು 400 ಅತಿಥಿಗಳು ಭೋಜನಕೂಟದ ಸಂದರ್ಭದಲ್ಲಿ ಸುಮಾರು ಮೂರು ಗಂಟೆ ಕಾಲ ಸುದೀರ್ಘ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಗಣ್ಯರಿಗಾಗಿ ಆಯೋಜಿಸಿರುವ ಭೋಜನ ಕೂಟ ಇದಕ್ಕೆ ವೇದಿಕೆಯಾಗಲಿದೆ.   11 ಮಂದಿ ಮಕ್ಕಳು, 13 ಮಹಿಳೆಯರು, 6 ಮಂದಿ ಅಂಗವಿಕಲ ಕಲಾವಿದರು, 26 ಮಂದಿ ಪುರುಷರು ಹಾಗೂ 22 ಮಂದಿ ವೃತ್ತಿಪರಿರುವ ತಂಡ ಸಂಗೀತ ಪ್ರಸ್ತುತಪಡಿಸಲಿದೆ. ವಯೊಲಿನ್‌ ನುಡಿಸುವ ಆರು ವರ್ಷದ ರಕ್ಷಿತಾ ತಂಡದ ಕಿರಿಯ ಸದಸ್ಯೆಯಾಗಿದ್ದರೆ, ಧಂಗಲಿ ಕಲಾವಿದ, 56 ವರ್ಷದ ಸೋನು ಧವಲು ಮಾಸೆ ಹಿರಿಯ ಸದಸ್ಯರಾಗಿದ್ದಾರೆ.   ವಯೊಲಿನ್, ಕೊಳಲು, ಸರೋದ್, ತಬಲಾ, ಸಿತಾರ್, ಮೃದಂಗ, ಭಪಂಗ್, ದಿಲ್‌ರುಬಾ, ಜಲತರಂಗ್‌ ಬಳಕೆಯಾಗಲಿರುವ ಪ್ರಮುಖ ಸಂಗೀತ ವಾದ್ಯಗಳಾಗಿವೆ.   ಭೋಜನಕೂಟದ ಹಿನ್ನೆಲೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ದೇಶದ ವಿವಿಧ ರಾಜ್ಯಗಳ ಕಲಾವಿದರು, ಆಯಾ ನೆಲದ ಶ್ರೀಮಂತ ಸಂಗೀತ ಪರಂಪರೆಯ ಪರಿಚಯ ಮಾಡಿಕೊಡುವರು. ಹಿಂದೂಸ್ತಾನಿ, ಕರ್ನಾಟಕ, ಜನಪದ, ಭಜನೆ ಒಳಗೊಂಡು ಎಲ್ಲ ಪ್ರಕಾರದ ಸಂಗೀತವು ಇರಲಿದೆ. ಅಲ್ಲದೆ, ಸಂಗೀತದ ಅಪರೂಪದ ವಾದ್ಯಗಳ ಪ್ರದರ್ಶನವು ಇರಲಿದೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT