ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ: 4 ವಾರಗಳ ಕಾಲ ವರದಿ ಬಹಿರಂಗಪಡಿಸದಂತೆ ಕೋರ್ಟ್‌ಗೆ ASI ಮನವಿ

Published 3 ಜನವರಿ 2024, 13:20 IST
Last Updated 3 ಜನವರಿ 2024, 13:20 IST
ಅಕ್ಷರ ಗಾತ್ರ

ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸರ್ವೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಭಾರತೀಯ ಪುರಾತತ್ವ ಇಲಾಖೆ (ASI), ಅದನ್ನು ನಾಲ್ಕು ವಾರಗಳಕಾಲ ಬಹಿರಂಗಪಡಿಸದಂತೆ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಈ ವಿಷಯವನ್ನು ತಿಳಿಸಿದ ಹಿಂದೂ ಅರ್ಜಿದಾರರ ಪರ ವಕೀಲರು, ‘ಅಲಹಾಬಾದ್ ಹೈಕೋರ್ಟ್‌ನ ಇತ್ತೀಚಿನ ತೀರ್ಪು ಆಧರಿಸಿರುವ ಎಎಸ್‌ಐ, ವರದಿ ಬಹಿರಂಗಕ್ಕೆ ಕಾಲಾವಕಾಶ ಕೋರಿದೆ. ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಪ್ರಕರಣವನ್ನು ಗುರುವಾರದವರೆಗೂ ಮುಂದೂಡಿದರು’ ಎಂದು ತಿಳಿಸಿದ್ದಾರೆ.

ಮುಸ್ಲಿಂ ಅರ್ಜಿದಾರರ ಪರ ಸಲ್ಲಿಕೆಯಾದ ಕೆಲ ಮನವಿಗಳನ್ನು ಡಿ. 19ರಂದು ಅಲಹಾಬಾದ್ ಹೈಕೋರ್ಟ್‌ ವಜಾಗೊಳಿಸಿತ್ತು. ಜ್ಞಾನವಾಪಿ ಮಸೀದಿ ಜಾಗದಲ್ಲಿ ದೇವಾಲಯದ ಮರು ನಿರ್ಮಾಣ ಮಾಡುವ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ವಿಷಯ ಸೇರಿದಂತೆ ಹಲವು ಅರ್ಜಿಗಳು ಸೇರಿದ್ದವು.

ಆರು ತಿಂಗಳೊಳಗೆ ಅರ್ಜಿ ಇತ್ಯರ್ಥಪಡಿಸಲು ಹೈಕೋರ್ಟ್ ಸೂಚನೆ

‘ವಿವಾದಿತ ಪ್ರದೇಶದ ಮಾಲೀಕತ್ವ ಹಾಗೂ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೋರಿ 1991ರಲ್ಲಿ ಸಲ್ಲಿಕೆಯಾಗಿರುವ ಸಿವಿಲ್ ಅರ್ಜಿಯೊಂದರ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯವು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಇತ್ತೀಚೆಗೆ ಆದೇಶಿಸಿದ್ದರು.

ವಿವಾದಿತ ಪ್ರದೇಶದ ಮಾಲೀಕತ್ವವನ್ನು ಹಾಗೂ ಅಲ್ಲಿ ಪೂಜೆಗೆ ಅವಕಾಶವನ್ನು ನೀಡುವಂತೆ ಮನವಿ ಮಾಡಿರುವ ಸಿವಿಲ್ ಅರ್ಜಿಗೆ ‘ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991’ ಅಡ್ಡಿ ಉಂಟುಮಾಡುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತ್ತು. ಈ ವಿವಾದವು ಎರಡು ದೊಡ್ಡ ಸಮುದಾಯಗಳಿಗೆ ಸಂಬಂಧಿಸಿದೆ, ಇದು ರಾಷ್ಟ್ರೀಯ ಮಹತ್ವದ್ದು ಎಂದು ಹೈಕೋರ್ಟ್‌ ಹೇಳಿದೆ. ಅರ್ಜಿಗಳು ವಿಚಾರಣಾ ನ್ಯಾಯಾಲಯದಲ್ಲಿ 32 ವರ್ಷಗಳಿಂದ ಬಾಕಿ ಇವೆ ಎಂದು ಹೇಳಿತ್ತು.

ಸಿವಿಲ್ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕಿದೆ. ಸಂಬಂಧಪಟ್ಟ ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಅಧೀನ ನ್ಯಾಯಾಲಯವು ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ಸೂಚನೆ ನೀಡಿತ್ತು. ವಿಚಾರಣಾ ನ್ಯಾಯಾಲಯವು ಅಗತ್ಯ ಕಂಡುಬಂದರೆ, ಮಸೀದಿ ಆವರಣದ ಸಮೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸೂಚಿಸಬಹುದು ಎಂದೂ ಹೇಳಿತ್ತು.

ಪೂಜಾ ಸ್ಥಳಗಳ (ವಿಶೇಷ ಅವಕಾಶಗಳ) ಕಾಯ್ದೆಯು ‘ಧಾರ್ಮಿಕ ಸ್ವರೂಪ’ವೆಂದರೆ ಏನು ಎಂಬುದನ್ನು ವ್ಯಾಖ್ಯಾನಿಸಿಲ್ಲ. ಬದಲಿಗೆ ಅದು, ‘ಧಾರ್ಮಿಕ ಸ್ಥಳ’ ಹಾಗೂ ಧಾರ್ಮಿಕ ಸ್ಥಳದ ‘ಸ್ಥಿತಿಯ ಪರಿವರ್ತನೆ’ಯನ್ನು ಮಾತ್ರ ವ್ಯಾಖ್ಯಾನಿಸಿದೆ. ಸ್ಥಳವೊಂದರ ಧಾರ್ಮಿಕ ಸ್ವರೂಪವನ್ನು ನ್ಯಾಯಾಲಯವು ದಾಖಲೆಗಳ ಆಧಾರದಲ್ಲಿ ತೀರ್ಮಾನಿಸಬಹುದು ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿತ್ತು.

1991ರಲ್ಲಿ ಮೊದಲ ಬಾರಿಗೆ ಸಲ್ಲಿಕೆಯಾದ ಅರ್ಜಿ

ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಮೊದಲ ಅರ್ಜಿಯನ್ನು 1991ರಲ್ಲಿ ಸಲ್ಲಿಸಲಾಗಿದೆ. ಜ್ಞಾನವಾಪಿ ಆವರಣದಲ್ಲಿ ಪೂಜೆ ಸಲ್ಲಿಸಲು ಅರ್ಜಿದಾರರು ಅವಕಾಶ ಕೋರಿದ್ದರು. ಎಎಸ್‌ಐ ತನ್ನ ಸಮೀಕ್ಷಾ ವರದಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ ಮಾರನೆಯ ದಿನ ಹೈಕೋರ್ಟ್‌ ಈ ಆದೇಶ ನೀಡಿತ್ತು.

ಜ್ಞಾನವಾಪಿ ಮಸೀದಿ ಆವರಣದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ದಶಕಗಳಿಂದಲೂ ವಿವಾದ ಇದೆ. ಆದರೆ, ಅಯೋಧ್ಯೆಯ ರಾಮ ಮಂದಿರ ವಿಚಾರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದ ನಂತರದಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನದ ಆವರಣವನ್ನು ‘ಹಿಂದಕ್ಕೆ ಪಡೆಯಲು’ ನಡೆದಿರುವ ಪ್ರಯತ್ನಗಳಿಗೆ ಹೊಸ ಹುರುಪು ಬಂದಿದೆ.

ಮೊಘಲ್ ದೊರೆ ಔರಂಗಜೇಬ್‌ 17ನೆಯ ಶತಮಾನದಲ್ಲಿ ದೇವಸ್ಥಾನದ ಒಂದು ಭಾಗವನ್ನು ಧ್ವಂಸಗೊಳಿಸಿದ್ದ ಎಂಬುದು ಹಿಂದೂ ಅರ್ಜಿದಾರರ ವಾದ. ಔರಂಗಜೇಬ್‌ನ ಆಡಳಿತ ಅವಧಿಗಿಂತ ಮೊದಲೂ ಮಸೀದಿ ಅಲ್ಲಿ ಇತ್ತು, ಅದರ ಬಗ್ಗೆ ಜಮೀನು ದಾಖಲೆಗಳಲ್ಲಿಯೂ ಉಲ್ಲೇಖ ಇದೆ ಎಂಬುದು ಮುಸ್ಲಿಂ ಪ್ರತಿವಾದಿಗಳ ವಾದ.

ವಜೂಖಾನಾ ಶುಚಿಗೊಳಿಸಲು ಅವಕಾಶ ಕೋರಿ ಹಿಂದೂಗಳ ಅರ್ಜಿ

ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ವಜೂ ಖಾನಾದಲ್ಲಿ ಕೆಲವೊಂದು ಮೀನುಗಳ ಸತ್ತಿದ್ದು, ಅದನ್ನು ಶುಚಿಗೊಳಿಸಲು ಅವಕಾಶ ನೀಡಬೇಕು ಎಂದು ಹಿಂದೂ ಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ ಅನ್ನು ಕೋರಿದ್ದರು.

ಆದರೆ ಇದಕ್ಕೆ ಮುಸ್ಲಿಂ ಪರ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದು, ವಜೂ ಖಾನಾ ಶುಚಿಗೊಳಿಸುವುದು ನಮ್ಮ ಜವಾಬ್ದಾರಿ ಎಂದಿದ್ದರು. ಈ ಕುರಿತು ಗುರುವಾರ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT