ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ: ವೈಜ್ಞಾನಿಕ ಸಮೀಕ್ಷೆ ಆರಂಭ

Published 4 ಆಗಸ್ಟ್ 2023, 9:45 IST
Last Updated 4 ಆಗಸ್ಟ್ 2023, 9:45 IST
ಅಕ್ಷರ ಗಾತ್ರ

 ವಾರಾಣಸಿ: ಬಿಗಿ ಭದ್ರತೆ ನಡುವೆ, ಇಲ್ಲಿನ ಜ್ಞಾನವಾಪಿ ಮಸೀದಿ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಶುಕ್ರವಾರ ವೈಜ್ಞಾನಿಕ ಸಮೀಕ್ಷೆಯನ್ನು ಆರಂಭಿಸಿತು.

ಈ ಮೊದಲೇ ಇದ್ದ ದೇವಾಲಯದ ಮೇಲೆ 17ನೇ ಶತಮಾನದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ ಎಂಬುದನ್ನು ನಿರ್ಣಯಿಸುವ ಉದ್ದೇಶದ ಈ ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್‌ ಗುರುವಾರ ಅನುಮತಿ ನೀಡಿತ್ತು.

ಸಮೀಕ್ಷೆಯನ್ನು ಪೂರ್ಣಗೊಳಿಸಲು ಎಎಸ್‌ಐಗೆ ಸೆಪ್ಟೆಂಬರ್ 4ರ ವರೆಗೆ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿದೆ.

ಬೆಳಿಗ್ಗೆ 7ಕ್ಕೆ ಆರಂಭವಾದ ಸಮೀಕ್ಷೆಯನ್ನು ಅಂಜುಮಾನ್‌ ಇಂತೆಜಾಮಿಯಾ ಮಸೀದಿ ಸಮಿತಿ ಸದಸ್ಯರು ಬಹಿಷ್ಕರಿಸಿದ್ದರು. ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರಿಂದ 2 ಗಂಟೆ ವರೆಗೆ ಸಮೀಕ್ಷೆಯನ್ನು ಸ್ಥಗಿತಗೊಳಿಸಿದ್ದ ಎಎಸ್‌ಐ ಸಿಬ್ಬಂದಿ, ನಂತರ ಮುಂದುವರಿಸಿದರು.

‘43 ಜನರಿರುವ ಎಎಸ್‌ಐ ತಂಡ ಸಮೀಕ್ಷೆ ನಡೆಸುತ್ತಿದೆ. ದೂರುದಾರರಾದ ಲಕ್ಷ್ಮಿ ಸಿಂಗ್, ಸೀತಾ ಸಾಹು, ರೇಖಾ ಪಾಠಕ್ ಹಾಗೂ ಮಂಜು ವ್ಯಾಸ್ ಅವರು ತಮ್ಮ ಪರ ವಕೀಲರೊಂದಿಗೆ ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಉಪಸ್ಥಿತರಿರುವರು’ ಎಂದು ಹಿಂದೂ ಅರ್ಜಿದಾರರ ಪರ ವಕೀಲ ಮದನಮೋಹನ್ ಯಾದವ್ ತಿಳಿಸಿದರು.

ಅರ್ಜಿದಾರರಾದ ರಾಖಿ ಸಿಂಗ್‌ ಸಮೀಕ್ಷೆ ವೇಳೆ ಹಾಜರಿರಲಿಲ್ಲ. ಅವರ ಪರ ವಕೀಲರಿದ್ದರು. ಹಿಂದೂ ಅರ್ಜಿದಾರರ ಪರ ಮತ್ತೊಬ್ಬ ವಕೀಲ ಸುಭಾಷ್‌ ಚತುರ್ವೇದಿ ಕೂಡ ಇದ್ದರು.

ಸಮೀಕ್ಷೆ ಕಾರ್ಯ ನಡೆಸಲು ಎಎಸ್‌ಐ ಸಿಬ್ಬಂದಿ ಮಸೀದಿ ಆವರಣ ಪ್ರವೇಶಿಸುತ್ತಿದ್ದಂತೆಯೇ, ಹೊರಗಡೆ ‘ಜೈ ಶ್ರೀರಾಮ್’ ಘೋಷಣೆಗಳು ಕೇಳಿಬಂದವು. ನಗರದ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಜೊತೆಗೆ ವ್ಯಾಪಕ ಭದ್ರತೆ ಏರ್ಪಡಿಸಲಾಗಿತ್ತು.

‘ವೈಜ್ಞಾನಿಕ ಸಮೀಕ್ಷೆ ನಡೆಸುವ ಕುರಿತು ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಮಿತಿಯು ಸುಪ್ರೀಂಕೋರ್ಟ್‌ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಕಾರಣ, ಮುಸ್ಲಿಂ ಪರ ವಕೀಲರು ಸಮೀಕ್ಷೆ ಸಂದರ್ಭದಲ್ಲಿ ಹಾಜರಿರಲಿಲ್ಲ’ ಎಂದು ಸಮಿತಿ ಕಾರ್ಯದರ್ಶಿ ಸೈಯದ್ ಮೊಹಮ್ಮದ್ ಯಾಸಿನ್‌ ತಿಳಿಸಿದರು.

‘ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದ ಬಗ್ಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು’ ಎಂದೂ ಹೇಳಿದರು.

‘ಈ ವಿಚಾರವಾಗಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸುವವರೆಗೆ ಸಮೀಕ್ಷೆಯನ್ನು ಮುಂದೂಡಬೇಕು ಎಂಬುದು ನಮ್ಮ ಮನವಿಯಾಗಿತ್ತು. ಇದೇ ವಿಷಯ ಕುರಿತು ದೆಹಲಿಯಲ್ಲಿರುವ ನಮ್ಮ ವಕೀಲರು ಇಲ್ಲಿನ ಅಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದರು. ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಗುರುವಾರ ಸಭೆ ನಡೆಸಿ, ಸಮೀಕ್ಷೆ ಕಾರ್ಯದಿಂದ ದೂರ ಉಳಿಯುವ ತೀರ್ಮಾನ ಕೈಗೊಂಡೆವು’ ಎಂದು ಯಾಸಿನ್‌ ಮಾಹಿತಿ ನೀಡಿದರು.

ಹೆಚ್ಚುವರಿ ಕಾಲಾವಕಾಶ:

ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚುವರಿಯಾಗಿ ನಾಲ್ಕು ವಾರಗಳ ಅವಕಾಶ ನೀಡುವಂತೆ ಎಎಸ್ಐ ಮನವಿಯನ್ನು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಪುರಸ್ಕರಿಸಿದ್ದಾರೆ.

‘ಈ ಮೊದಲು ಆಗಸ್ಟ್‌ 4ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್‌ 4ರ ವರೆಗೆ ಗಡುವು ವಿಸ್ತರಿಸಿದೆ’ ಎಂದು ಹಿಂದೂ ಅರ್ಜಿದಾರರ ಪರ ವಕೀಲ ಮದನಮೋಹನ್ ಯಾದವ್ ತಿಳಿಸಿದ್ದಾರೆ.

ಇವನ್ನೂ ಓದಿ
ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ
* ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಜ್ಞಾನವಾಪಿ ಮಸೀದಿ ಸಮಿತಿ
* Gyanvapi ASI Survey | ದೇಗುಲವಿದ್ದ ಜಾಗದಲ್ಲಿ ಮಸೀದಿ..?; ಈವರೆಗಿನ ಘಟನಾವಳಿ... 
* ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಇಂದು: ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT