ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಏಷ್ಯಾಕ್ಕೆ ದುರಂತಮಯ ವರ್ಷ: ಡಬ್ಲ್ಯುಎಂಒ ವರದಿ

Published 23 ಏಪ್ರಿಲ್ 2024, 15:33 IST
Last Updated 23 ಏಪ್ರಿಲ್ 2024, 15:33 IST
ಅಕ್ಷರ ಗಾತ್ರ

ನವದೆಹಲಿ: 2023ನೇ ಸಾಲಿನಲ್ಲಿ ಏಷ್ಯಾವು ಹವಾಮಾನ, ವಾಯುಗುಣ ಮತ್ತು ನೀರಿಗೆ ಸಂಬಂಧಿಸಿದಂತೆ ಹಲವು ರೀತಿಯ ವೈಪರೀತ್ಯಗಳನ್ನು ಅನುಭವಿಸಿದೆ. ಈ ಮೂಲಕ ಈ ಸಾಲಿನಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ದುರಂತಗಳನ್ನು ಕಂಡ ಪ್ರದೇಶ ಎಂದೆನಿಸಿಕೊಂಡಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಬಿಡುಗಡೆ ಮಾಡಿರುವ ವರದಿ ಹೇಳಿದೆ.

ಪ್ರವಾಹಗಳು ಮತ್ತು ಚಂಡಮಾರುತಗಳಿಂದಾಗಿ ಅತಿ ಹೆಚ್ಚು ಜೀವಹಾನಿ ಮತ್ತು ಆರ್ಥಿಕ ನಷ್ಟ ಉಂಟಾಗಿದೆ. ಬಿಸಿಗಾಳಿಯ ಪರಿಣಾಮ ತೀವ್ರವಾಗಿತ್ತು. ಈಶಾನ್ಯ ಪೆಸಿಫಿಕ್‌ ಸಾಗರದ ಮೇಲ್ಮೈ ತಾಪಮಾನ ದಾಖಲೆ ಮಟ್ಟದಲ್ಲಿತ್ತು ಮತ್ತು ಆರ್ಕ್ಟಿಕ್‌ ಸಾಗರದಲ್ಲೂ ಬಿಸಿ ಮಾರುತ ಬೀಸಿದೆ ಎಂದು ಡಬ್ಲ್ಯುಎಂಒದ ‘ಏಷ್ಯಾದ ಹವಾಮಾನ ಸ್ಥಿತಿಗತಿ– 2023’ ವರದಿಯಲ್ಲಿ ಹೇಳಲಾಗಿದೆ. 

ಈ ಪ್ರದೇಶದ ಹಲವು ದೇಶಗಳಲ್ಲಿ 2023ನೇ ಇಸವಿ ಅತಿ ಹೆಚ್ಚು ಉಷ್ಣಾಂಶ ದಾಖಲಾದ ವರ್ಷವಾಗಿದೆ. ಬರ, ಬಿಸಿಗಾಳಿ, ಪ್ರವಾಹ, ಚಂಡಮಾರುತದಂಥ ಹವಾಮಾನ ವೈಪರೀತ್ಯವನ್ನು ಇಲ್ಲಿಯ ದೇಶಗಳು ಅನುಭವಿಸಿವೆ. ಈ ಘಟನಾವಳಿಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಜನರ ಮೇಲೆ ಪರಿಣಾಮ ಬೀರಿವೆ ಎಂದು ಡಬ್ಲ್ಯುಎಂಒ ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೊ ಹೇಳಿದ್ದಾರೆ.

ಈ ಏಲ್ಲಾ ಹವಾಮಾನ ಸಂಬಂಧಿ ದುರಂತಗಳಲ್ಲಿ ನೀರಿಗೆ ಸಂಬಂಧಿಸಿದ 79 ದುರಂತಗಳು ವರದಿಯಾಗಿವೆ. ಒಟ್ಟು ಪ್ರಾಕೃತಿಕ ದುರಂತಗಳ ಪೈಕಿ ಇದು ಶೇ 80ರಷ್ಟು. ಈ ದುರಂತಗಳಿಂದ ಸುಮಾರು 2 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 90 ಲಕ್ಷ ಮಂದಿಯ ಜೀವನದ ಮೇಲೆ ಪರಿಣಾಮ ಉಂಟಾಗಿದೆ.

ಭಾರತದಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಬೀಸಿದ ಬಿಸಿಗಾಳಿಯಿಂದಾಗಿ 110ಕ್ಕೂ ಹೆಚ್ಚು ಜನರು ಶಾಖಾಘಾತದಿಂದ ಮೃತಪಟ್ಟಿದ್ದಾರೆ. ಆಗ್ನೇಯ ಏಷ್ಯಾದಲ್ಲಿ ಏಪ್ರಿಲ್‌ ಮತ್ತು ಮೇ ಬಿಸಿಗಾಳಿಯ ತೀವ್ರತೆ ಹೆಚ್ಚಾಗಿಯೇ ಇತ್ತು ಎಂದು ವರದಿ ಹೇಳಿದೆ.

ತುರ್ಕಮೆನಿಸ್ತಾನ, ಉಜ್ಬೇಕಿಸ್ತಾನ, ಕಜಖಸ್ತಾನ, ಅಫ್ಗಾನಿಸ್ತಾನ, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಆಗ್ನೇಯ ಚೀನಾದಲ್ಲಿ ಬರ ಪರಿಸ್ಥಿತಿ ಇತ್ತು. ಭಾರತದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಸುರಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹಿಂದೂ ಮಹಾಸಾಗರದಲ್ಲಿ ಬೀಸಿದ ಮೋಕ ಚಂಡಮಾರುತದಿಂದ ಮ್ಯಾನ್ಮಾರ್‌ ತತ್ತರಿಸಿತ್ತು. ಈ ಚಂಡಮಾರುತದಿಂದ 156 ಜನರು ಮೃತಪಟ್ಟಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT