ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ ಪ್ರವಾಹ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರ ನದಿ

Published 1 ಜುಲೈ 2024, 13:47 IST
Last Updated 1 ಜುಲೈ 2024, 13:47 IST
ಅಕ್ಷರ ಗಾತ್ರ

ಗುವಾಹಟಿ: ಪಕ್ಕದ ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ತಿಳಿಸಿದ್ದಾರೆ.

ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ, ಮುಂದಿನ ಎರಡು– ಮೂರು ದಿನಗಳ ಕಾಲ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದರು.

ಇವತ್ತಿನವರೆಗೆ 14 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿಯಿದ್ದು, 2.74 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. ಎನ್‌ಡಿಆರ್‌ಎಫ್‌ ಮತ್ತು ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ದೂರವಾಣಿ ಕರೆ ಮೂಲಕ ಮಾಹಿತಿ ಪಡೆದಿದ್ದು, ನೆರವಿನ ಭರವಸೆ ನೀಡಿದ್ದಾರೆ ಎಂದರು.

ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲೂ ಪ್ರವಾಹ ಸ್ಥಿತಿ

ಅಸ್ಸಾಂನಲ್ಲಿ ತಲೆದೂರಿರುವ ಪ್ರವಾಹ ಸ್ಥಿತಿಯಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿನ 233 ಅರಣ್ಯ ಶಿಬಿರಗಳ ಮೇಲೆ ಪರಿಣಾಮ ಬೀರಿದೆ. ಶೇಕಡ 43ರಷ್ಟು ಅರಣ್ಯ ಶಿಬಿರಗಳು ಮುಳುಗಡೆಯಾಗಿವೆ ಎಂದು ಅಧಿಕೃತ ವರದಿ ಸೋಮವಾರ ತಿಳಿಸಿದೆ.

ನೀರಿನ ಮಟ್ಟ ಹೆಚ್ಚಿದ ಪರಿಣಾಮ ಪ್ರಾಣಿಗಳು ಸಮಸ್ಯೆ ಎದುರಿಸುತ್ತಿವೆ. ವನ್ಯಜೀವಿಗಳ ಆವಾಸಸ್ಥಾನದ ಪ್ರಮುಖ ಜಾಗಗಳು ನೀರಿನಲ್ಲಿ ಮುಳುಗಿವೆ. ಹೀಗಾಗಿ ಪ್ರಾಣಿಗಳು ಎತ್ತರದ ಜಾಗವನ್ನು ಹುಡುಕುತ್ತ ಪೂರ್ವ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ದಕ್ಷಿಣ ದಿಕ್ಕಿನ ಕಡೆಗೆ ಸಾಗಲು ರಾಷ್ಟ್ರೀಯ ಹೆದ್ದಾರಿ 715 ಅನ್ನು ದಾಟುತ್ತಿವೆ. ಪ್ರವಾಹ ಅಥವಾ ಅಪಘಾತದ ಕಾರಣದಿಂದ ಈವರೆಗೆ ಯಾವುದೇ ಪ್ರಾಣಿ ಮೃತಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 101 ಅರಣ್ಯ ಶಿಬಿರಗಳು ಮುಳುಗಡೆಯಾಗಿವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಮುಂಬರುವ ಪ್ರವಾಹ ಸ್ಥಿತಿಯನ್ನು ಎದುರಿಸಲು ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT