ಪುದುಚೇರಿ: ಕೇಂದ್ರಾಡಳಿತ ಪ್ರದೇಶಕ್ಕೆ ಪೂರ್ಣ ರಾಜ್ಯ ಸ್ಥಾನಮಾನ ನೀಡಬೇಕೆಂಬ ಮನವಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ಪುದುಚೇರಿ ವಿಧಾನಸಭೆ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ನಿರ್ಣಯವನ್ನು ಮೊದಲು ಡಿಎಂಕೆ ಶಾಸಕರಾದ ಆರ್. ಶಿವ, ಎ.ಎಂ.ಎಚ್. ನಜೀಮ್, ಆರ್. ಸೆಂಥಿಲ್ ಕುಮಾರ್ ಮತ್ತು ಪಕ್ಷೇತರ ಸದಸ್ಯ ಜಿ.ನೆಹರು ಅಲಿಯಾಸ್ ಕುಪ್ಪುಸಾಮಿ ಅವರು ಜಂಟಿಯಾಗಿ ಮಂಡಿಸಿದರು. ಮುಖ್ಯಮಂತ್ರಿ ಎನ್. ರಂಗಸಾಮಿ ಅವರ ಮನವಿಯ ಮೇರೆಗೆ ನಿರ್ಣಯವನ್ನು ಅಧಿಕೃತ ನಿರ್ಣಯವಾಗಿ ಅಂಗೀಕರಿಸಲಾಯಿತು.
ಪುದುಚೇರಿಗೆ ರಾಜ್ಯ ಸ್ಥಾನಮಾನದ ಬೇಡಿಕೆಯನ್ನು 1972ರಿಂದಲೇ ಕೇಂದ್ರದ ಮುಂದಿಡುತ್ತಾ ಬರಲಾಗಿದೆ. ಪದೇ ಪದೇ ಮನವಿ ಮಾಡಿದರೂ ಕೇಂದ್ರವು ಯಾವುದೇ ಸಮಿತಿ ರಚಿಸಿಲ್ಲ. ಪುದುಚೇರಿಯು ಕೇಂದ್ರಾಡಳಿತ ಪ್ರದೇಶವಾಗಿಯೇ ಮುಂದುವರಿಯುತ್ತದೆ ಎಂಬ ನಿಲುವನ್ನು ಕೇಂದ್ರ ತೆಗೆದುಕೊಂಡಿದೆ. ಆದ್ದರಿಂದ, ಜನರ ಹಕ್ಕುಗಳನ್ನು ಗೌರವಿಸುವಂತೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನಕ್ಕಾಗಿ ಕೇಂದ್ರವನ್ನು ನಿರಂತರವಾಗಿ ಒತ್ತಾಯಿಸಬೇಕು. ‘ಕೇಂದ್ರವು ಈ ಬೇಡಿಕೆಗೆ ಮನ್ನಣೆ ನೀಡಬೇಕು’ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.
ಪುದುಚೇರಿಗೆ ರಾಜ್ಯ ಸ್ಥಾನಮಾನದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ ನಂತರ ಸ್ಪೀಕರ್ ಆರ್. ಸೆಲ್ವಂ ಅವರು ಸದನವನ್ನು ಮುಂದೂಡಿದರು. ವಿಧಾನಸಭೆಯ ಬಜೆಟ್ ಅಧಿವೇಶನ ಜುಲೈ 31 ರಂದು ಪ್ರಾರಂಭವಾಗಿತ್ತು.