ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರಾಜ್ಯ ಚುನಾವಣೆ ಫಲಿತಾಂಶ: ಬಿಜೆಪಿ ಜಯಭೇರಿ– ಎಎಪಿಗೆ ಗರಿ

ನೆಲಕಚ್ಚಿದ ಕಾಂಗ್ರೆಸ್‌ l ಉತ್ತರ ಪ್ರದೇಶ ಗೆದ್ದ ಯೋಗಿ ಆದಿತ್ಯನಾಥ l ಗೋವಾ, ಮಣಿಪುರ, ಉತ್ತರಾಖಂಡದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ
Last Updated 10 ಮಾರ್ಚ್ 2022, 19:37 IST
ಅಕ್ಷರ ಗಾತ್ರ

ಪ್ರತಿಕೂಲ ಸನ್ನಿವೇಶವನ್ನು ಅನುಕೂಲಕಾರಿಯಾಗಿ ಪರಿವರ್ತಿಸಿಕೊಂಡಿರುವ ಬಿಜೆಪಿ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳಲ್ಲಿ ಇದ್ದ ಗೆಲುವಿನ ಅವಕಾಶವನ್ನು ಕೈಚೆಲ್ಲಿರುವ ಕಾಂಗ್ರೆಸ್‌, ನೆಲ ಕಚ್ಚಿದೆ. ದೆಹಲಿಯಲ್ಲಿ ಸತತ ಎರಡು ಅವಧಿಯಿಂದ ಭಾರಿ ಬಹುಮತದ ಸರ್ಕಾರ ನಡೆಸುತ್ತಿರುವ ಎಎಪಿ, ಪಂಜಾಬ್‌ ಅನ್ನು ಮುಡಿಗೇರಿಸಿಕೊಂಡಿದೆ. ಗೋವಾಕ್ಕೂ ನೆಲೆ ವಿಸ್ತರಿಸಿದೆ. ಪಂಜಾಬ್‌ ರಾಜಕಾರಣದ ಘಟಾನುಘಟಿ ರಾಜಕಾರಣಿಗಳನ್ನು ಎಎಪಿ ಗುಡಿಸಿಹಾಕಿದೆ.

ದೆಹಲಿ ಗದ್ದುಗೆಯ ಹೆಬ್ಬಾಗಿಲು ಎಂದು ಉತ್ತರ ಪ್ರದೇಶವನ್ನು ಹೇಳುತ್ತಾರೆ. ಹಾಗಾಗಿ, ಮುಂದಿನ ಬಾರಿಯೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಸ್ಥಾನಗಳ ಸಂಖ್ಯೆಯಲ್ಲಿ ಗಣನೀಯವಾದ ಕುಸಿತವಾದರೂ (2017ರಲ್ಲಿ 312 ಇತ್ತು, ಈ ಬಾರಿ ಅದು 256ಕ್ಕೆ ಕುಸಿದಿದೆ) ಮತ ಪ್ರಮಾಣವನ್ನು ಬಿಜೆಪಿ ಹೆಚ್ಚಿಸಿಕೊಂಡಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶದ ರಾಜಕಾರಣವು ಯಾವ ರೀತಿಯಲ್ಲಿ ಬದಲಾಗಿದೆ ಎಂಬ ಹೊಳಹುಗಳನ್ನು ಈ ಬಾರಿಯ ಫಲಿತಾಂಶವು ನೀಡಿದೆ.

ಹಿಂದುತ್ವದ ಹೆಸರಿನ ಧ್ರುವೀಕರಣವೇ ಬಿಜೆಪಿಗೆ ಚುನಾವಣೆಗಳನ್ನು ಗೆಲ್ಲಿಸಿಕೊಡುವ ಬಹುಮುಖ್ಯ ಅಂಶ ಎಂಬುದನ್ನು ಈ ಬಾರಿಯ ಫಲಿತಾಂಶವು ಸಾಬೀತು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಂತಾದನಾಯಕರು 2013ರ ಮುಝಫ್ಫರ್‌ನಗರ ಗಲಭೆ, ಕೈರಾನಾದಿಂದ ಹಿಂದೂಗಳ ವಲಸೆಯಂತಹ ವಿಚಾರಗಳನ್ನು ಪದೇ ಪದೇ ಪ್ರಸ್ತಾಪಿಸಿದ್ದಾರೆ. ‘ಬಿಜೆಪಿಯು ಪ್ರತಿಪಾದಿಸುತ್ತಿರುವ ಹಿಂದುತ್ವವು ಆಳವಾಗಿ ಬೇರೂರಿದೆ. ಚುನಾವಣೆ ಬಂದಾಗಲೆಲ್ಲ ಒಮ್ಮೆ ದೂಳು ಹೊಡೆದರೆ ತನ್ನ ಕೆಲಸವನ್ನು ಅದು ಮೌನವಾಗಿಯೇ ಮಾಡಿಬಿಡುತ್ತದೆ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಚುನಾವಣೆ ಘೋಷಣೆಯಾಗುವ ಹೊತ್ತಿನ ಸ್ಥಿತಿಯ ಜತೆಗೆ ಫಲಿತಾಂಶವನ್ನು ಹೋಲಿಸಿ ನೋಡಿದರೆ ಈ ಅಂಶಕ್ಕೆ ಪುಷ್ಟಿ ದೊರೆಯುತ್ತದೆ.

ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆ ಘೋಷಣೆಯಾಗುವುದಕ್ಕೆ ಮುನ್ನ ಈ ರಾಜ್ಯಗಳಲ್ಲಿ ಬಿಜೆಪಿಯ ಸ್ಥಿತಿ ಬಹಳ ಭದ್ರವಾಗಿ ಇದ್ದಂತೆ ಕಾಣಿಸಲಿಲ್ಲ. ಚುನಾವಣೆ ನಡೆಯುವುದಕ್ಕೆ ಮೊದಲಿನ ಕೆಲವು ವರ್ಷಗಳಲ್ಲಿ ಹಲವು ಸವಾಲುಗಳು ಬಿಜೆಪಿಯ ಮುಂದೆ ಇದ್ದವು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಕೋವಿಡ್‌ ಎರಡನೇ ಅಲೆಯನ್ನು ನಿಭಾಯಿಸಿದ ರೀತಿಯ ಬಗ್ಗೆ ಅವರ ಸರ್ಕಾರದ ಸಚಿವರು ಮತ್ತು ಬಿಜೆಪಿಯ ಶಾಸಕರೇ ಅಪಸ್ವರ ಎತ್ತಿದ್ದರು. ಕೋವಿಡ್‌ ಮೊದಲ ಅಲೆಯಲ್ಲಿ ನಡೆದೇ ಊರು ಸೇರಿದ್ದ ವಲಸೆ ಕಾರ್ಮಿಕರು ಅನುಭವಿಸಿದ ಸಂಕಷ್ಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ರಾಜ್ಯದಲ್ಲಿ ನಿರುದ್ಯೋಗ ವ್ಯಾಪಕವಾಗಿದೆ ಎಂಬುದು ಯುವಜನರ ನಿತ್ಯದ ಆರೋಪವಾಗಿತ್ತು. ಪ್ರತಿಸ್ಪರ್ಧಿ ಪಕ್ಷಗಳಾದ ಎಸ್‌ಪಿ ಮತ್ತು ಕಾಂಗ್ರೆಸ್‌ ಈ ವಿಚಾರವನ್ನುಚುನಾವಣಾ ಪ್ರಚಾರದಲ್ಲಿ ಕೂಡ ಹಲವು ಬಾರಿ ಪ್ರಸ್ತಾಪಿಸಿದ್ದವು.

ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಠಿಣಗೊಳಿಸಿದ ಪರಿಣಾಮ ಬೀಡಾಡಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿತ್ತು. ಈ ಜಾನುವಾರುಗಳು ರೈತರ ಹೊಲಗಳಿಗೆ ನುಗ್ಗಿ ಫಸಲು ನಾಶ ಮಾಡಿ ತಮ್ಮನ್ನು ಹೈರಾಣು ಮಾಡಿವೆ ಎಂಬುದು ಉತ್ತರ ಪ್ರದೇಶದ ಎಲ್ಲ ಭಾಗಗಳ ರೈತರ ಅಳಲಾಗಿತ್ತು. ಆದಿತ್ಯನಾಥ ಅವರು ಚುನಾವಣಾ ಪ್ರಚಾರ ಸಮಾವೇಶ ನಡೆಸಿದ್ದ ಮೈದಾನದ ಸುತ್ತ ರೈತರು ಬೀಡಾಡಿ ಜಾನುವಾರುಗಳನ್ನು ತಂದು ಬಿಟ್ಟ ಪ್ರಸಂಗವೂ ನಡೆದಿತ್ತು.

ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಜಾರಿಗೆ ತಂದಿದ್ದ ಮೂರು ಕಾಯ್ದೆಗಳ ವಿರುದ್ಧ ಉತ್ತರ ಪ್ರದೇಶದ ಪಶ್ಚಿಮ ಭಾಗ, ಪಂಜಾಬ್‌ ಮತ್ತು ಹರಿಯಾಣದ ರೈತರು ದೆಹಲಿಯಲ್ಲಿ ಒಂದು ವರ್ಷ ಪ್ರತಿಭಟನೆ ನಡೆಸಿದ್ದರು. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರು ರೈತರು ಹತರಾಗಿದ್ದರು. ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರು ಈ ಪ್ರಕರಣದ ಪ್ರಮುಖ ಆರೋಪಿ. ಈ ಎಲ್ಲ ಕಾರಣದಿಂದ ಬಿಜೆಪಿಯನ್ನು ಸೋಲಿಸಿಯೇ ತೀರುತ್ತೇವೆ ಎಂದು ರೈತ ನಾಯಕರು ಶಪಥ ಮಾಡಿದ್ದರು.

ಇತರ ಹಿಂದುಳಿದ ವರ್ಗಗಳ (ಒಬಿಸಿ) ದೊಡ್ಡ ಪ್ರಮಾಣದ ಮತಗಳು 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲ ತುಂಬಲು ಕಾರಣವಾಗಿದ್ದ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ, ರಾಷ್ಟ್ರೀಯ ಲೋಕ ದಳ ಹಾಗೂ ಒಬಿಸಿ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಸ್ವಾಮಿ ಪ್ರಸಾದ್‌ ಮೌರ್ಯ, ದಾರಾ ಸಿಂಗ್ ಚೌಹಾನ್‌ ಅಂಥವರು ಎಸ್‌ಪಿಯ ಜತೆ ಕೈಜೋಡಿಸಿದ್ದರು. ರೈತರು, ಯುವ ಜನರು, ಒಬಿಸಿಯ ಜಾತಿ ಸಮೀಕರಣ ಎಲ್ಲವೂ ಬಿಜೆಪಿ ವಿರುದ್ಧ ಇದ್ದಂತೆ ಕಾಣಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗಳಿಗಿಂತ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ರ‍್ಯಾಲಿಗಳಿಗೆ ಹೆಚ್ಚು ಜನರು ಸೇರುತ್ತಿದ್ದಾರೆ ಎಂಬುದನ್ನು ವಿಶ್ಲೇಷಕರಲ್ಲಿ ಹಲವರು ಗುರುತಿಸಿದ್ದಾರೆ.

ಈ ಅಂಶಗಳು ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ಪರವಾದ ಮತಗಳಾಗಿ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆ ಆಗಲಿಲ್ಲವಾದರೂ ಎಸ್‌ಪಿಯ ಮತ ಪ್ರಮಾಣ ಮತ್ತು ಗೆದ್ದ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿದೆ ಎಂಬುದು ನಿಜ. ಆದರೆ, ಬಿಜೆಪಿಯ ವಿರುದ್ಧ ಇರುವ ಅಂಶಗಳನ್ನೆಲ್ಲ ಒಗ್ಗೂಡಿಸಿ ಅಧಿಕಾರಕ್ಕೆ ಏರಬೇಕು ಎಂಬ ಅಖಿಲೇಶ್‌ ಅವರ ಉಮೇದು ಈಡೇರಲಿಲ್ಲ.

ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳಿಗೆ ಜನರ ಮುಂದಿಡಲು ಇದ್ದದ್ದು ಒಂದೋ ಎರಡೋ ವಿಚಾರಗಳು ಮಾತ್ರ. ಮಹಿಳಾ ಕೇಂದ್ರಿತವಾಗಿ ಮಾತ್ರ ಕಾಂಗ್ರೆಸ್‌ನ ಪ್ರಚಾರ ಅಭಿಯಾನ ಇತ್ತು. ನಿರುದ್ಯೋಗ ಮತ್ತು ರೈತರ ಸಮಸ್ಯೆಗಳನ್ನಷ್ಟೇ ಎಸ್‌ಪಿ ಉಲ್ಲೇಖಿಸಿತ್ತು.

ಆದರೆ,ಪ್ರತಿಕೂಲ ಸನ್ನಿವೇಶದಲ್ಲಿಯೂ ಬಿಜೆಪಿಯ ಪರವಾಗಿ ಹಲವು ಅಂಶಗಳು ಕೆಲಸ ಮಾಡಿವೆ. ‘ಡಬಲ್‌ ಎಂಜಿನ್‌’ ಸರ್ಕಾರ ಎಂಬ ಬಿಜೆಪಿಯ ಸಂಕಥನಕ್ಕೆ ನಾಲ್ಕು ರಾಜ್ಯಗಳ ಮತದಾರರು ಮಣೆ ಹಾಕಿದ್ದಾರೆ.

‘ಪ್ರಬಲ ನಾಯಕತ್ವ’ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ಎಂಬುದು ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಸ್ತಾಪಿಸಿದ ವಿಚಾರಗಳಲ್ಲಿ ಒಂದು. ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಭದ್ರತೆ, ಆಂತರಿಕ ಸುರಕ್ಷತೆ, ಗೂಂಡಾಗಳಿಂದ ರಕ್ಷಣೆ, ಹೆದ್ದಾರಿ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ, ಸಂಕಷ್ಟದ ಕಾಲದಲ್ಲಿ ಉಚಿತ ಪಡಿತರ ವಿತರಣೆ, ರೈತರಿಗೆ ಮತ್ತು ಇತರ ಯೋಜನೆಗಳಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ... ಹೀಗೆ ಮತ ತಂದುಕೊಡುವ ಹತ್ತಾರು ಅಂಶಗಳು ಬಿಜೆಪಿ ಜೋಳಿಗೆಯಲ್ಲಿ ಇದ್ದವು.

ಕಾಶಿ ವಿಶ್ವನಾಥ ದೇವಾಲಯ ನವೀಕರಣ ಯೋಜನೆಯು ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆ ಮಾಡಲಾಯಿತು. ಅತ್ಯಂತ ವೈಭ
ವೋಪೇತವಾಗಿ ನಡೆದ ಕಾರ್ಯಕ್ರಮವು ಮೋದಿ ಅವರು ‘ಹಿಂದೂ ಹೃದಯ ಸಾಮ್ರಾಟ’ ಎಂಬುದನ್ನು ಮತ್ತೆ ಸಾರಿ ಹೇಳಿತು.

ಉತ್ತರಾಖಂಡದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬಿಜೆಪಿ ಬದಲಿಸಿತ್ತು. ಆಡಳಿತ ವಿರೋಧಿ ಅಲೆಯೂ ಇದೆ ಎಂದು ಹೇಳಲಾಗಿತ್ತು. ಆದರೆ, ಹಿಂದೂಗಳ ಪ್ರಮುಖ ತೀರ್ಥ ಕ್ಷೇತ್ರಗಳಾದ ಕೇದಾರ, ಬದರಿ, ಯಮುನೋತ್ರಿ, ಗಂಗೋತ್ರಿಯನ್ನು ಸಂಪರ್ಕಿಸುವ ಚಾರ್ ಧಾಮ್‌ ಪರಿಯೋಜನ ಎಂಬುದು ಹಿಂದುತ್ವದ ಮುದ್ರೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ಉತ್ತರಾಖಂಡವನ್ನು ಬಿಜೆಪಿಯ ಮಡಿಲಲ್ಲಿಯೇ ಉಳಿಸಿತು. ಕರ್ನಾಟಕದಲ್ಲಿ ಆರಂಭವಾದ ಹಿಜಾಬ್‌ ವಿವಾದವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಹಿಂದೂ ಮತಗಳ ಕ್ರೋಡೀಕರಣಕ್ಕೆ ಅದೂ ನೆರವಾಗಿದೆ ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT