ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಶ್ರಯ ಕೇಂದ್ರದ 14 ಮಂದಿ ಸಾವು: ಮ್ಯಾಜಿಸ್ಟ್ರೇಟ್‌ ತನಿಖೆಗೆ ಆತಿಶಿ ಸೂಚನೆ

Published : 2 ಆಗಸ್ಟ್ 2024, 14:26 IST
Last Updated : 2 ಆಗಸ್ಟ್ 2024, 14:26 IST
ಫಾಲೋ ಮಾಡಿ
Comments

ನವದೆಹಲಿ: ವಾಯವ್ಯ ದೆಹಲಿಯ ರೋಹಿಣಿಯಲ್ಲಿರುವ ಆಶಾ ಕಿರಣ ಕೇಂದ್ರದ 14 ನಿವಾಸಿಗಳ ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ, 48 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ದೆಹಲಿ ಸಚಿವೆ ಆತಿಶಿ ಅವರು ಕಂದಾಯ ಇಲಾಖೆಗೆ ಸೂಚಿಸಿದ್ದಾರೆ. 

ದೆಹಲಿ ಸರ್ಕಾರವು ಬುದ್ಧಿಮಾಂದ್ಯರಿಗೆ ಆಶ್ರಯ ಕಲ್ಪಿಸಲು ಆಶಾ ಕಿರಣ ಆಶ್ರಯ ಕೇಂದ್ರ ನಡೆಸುತ್ತಿದೆ. ಇದು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಈ ಇಲಾಖೆಯ ಸಚಿವರಾಗಿದ್ದ ರಾಜ್‌ಕುಮಾರ್‌ ಆನಂದ್ ಅವರು ರಾಜೀನಾಮೆ ನೀಡಿದ ಬಳಿಕ ಹೊಸ ಸಚಿವರ ನೇಮಕ ಆಗಿಲ್ಲ. 

ಆಶಾ ಕಿರಣ ಕೇಂದ್ರದಲ್ಲಿ ಈ ವರ್ಷದ ಜನವರಿಯಿಂದ ಆಗಿರುವ ಸಾವಿನ ಕುರಿತಾದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಆತಿಶಿ ಅವರು ತನಿಖೆಗೆ ಸೂಚಿಸಿದ್ದಾರೆ. 

‘ಆರೋಗ್ಯ ಸಮಸ್ಯೆಗಳು ಮತ್ತು ಅಪೌಷ್ಟಿಕತೆಯಿಂದಾಗಿ ಸಾವು ಸಂಭವಿಸಿವೆ ಎಂದು ವರದಿಯಾಗಿದೆ. ಇದು ಆಶಾಕಿರಣ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಇರುವುದನ್ನು ಸೂಚಿಸುತ್ತದೆ. ಸತ್ತವರಲ್ಲಿ ಕೆಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಆದರೂ, ಅವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

‘ದೇಶದ ರಾಜಧಾನಿಯಲ್ಲಿ ಇಂತಹ ಕೆಟ್ಟ ಸುದ್ದಿ ಕೇಳಬೇಕಾಗಿ ಬಂದದ್ದು ಆಘಾತ ಉಂಟುಮಾಡಿದೆ. ಈ ರೀತಿಯ ಲೋಪಗಳನ್ನು ನಾವು ಸಹಿಸುವುದಿಲ್ಲ. ಇದು ಗಂಭೀರ ವಿಷಯವಾಗಿದೆ. ಇಂತಹ ಆಶ್ರಯ ಕೇಂದ್ರಗಳ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಇಡೀ ವ್ಯವಸ್ಥೆಯನ್ನು ಸರಿಪಡಿಸಲು ತನಿಖೆಯ ಅಗತ್ಯವಿದೆ’ ಎಂದಿದ್ದಾರೆ.

ತನಿಖೆಗೆ ಎಲ್‌ಜಿ ನಿರ್ದೇಶನ: ಆಶಾ ಕಿರಣ ಆಶ್ರಯ ಕೇಂದ್ರದ ನಿವಾಸಿಗಳ ಸಾವು ಪ್ರಕರಣ ಹಾಗೂ ದೆಹಲಿಯಲ್ಲಿರುವ ಎಲ್ಲ ಆಶ್ರಯ ತಾಣಗಳ ಸ್ಥಿತಿಗತಿಯ ಕುರಿತು ತನಿಖೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ನಿರ್ದೇಶಿಸಿದ್ದಾರೆ. 

ಒಂದೇ ತಿಂಗಳಲ್ಲಿ 14 ಸಾವು

ಬುದ್ಧಮಾಂದ್ಯರ ಆರೈಕೆಗಾಗಿ ಇರುವ ಆಶಾ ಕಿರಣ ಆಶ್ರಯ ಕೇಂದ್ರದಲ್ಲಿ ಜುಲೈ ತಿಂಗಳಲ್ಲಿ 14 ಸಾವು ವರದಿಯಾಗಿದೆ. ಸತ್ತವರಲ್ಲಿ 13 ಮಂದಿ ವಯಸ್ಕರು ಹಾಗೂ ಹದಿಹರೆಯದ ಒಬ್ಬರು ಸೇರಿದ್ದಾರೆ. ಈ ವಸತಿಗೃಹದಲ್ಲಿ ಒಟ್ಟು 980 ಮಂದಿ ಇದ್ದು ಅವರ ಆರೈಕೆಗೆ 450 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

‘ಈಗ ಸತ್ತವರಲ್ಲಿ ಕೆಲವರು ಜೂನ್‌ ತಿಂಗಳಲ್ಲೇ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದರು. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಆತಿಶಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT