ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರ ನಿರ್ಮಾಣಕ್ಕೆ ನಾಂದಿ | ಶತಮಾನಗಳ ಕಾಯುವಿಕೆಗೆ ಕೊನೆ

ರಾಮಜನ್ಮಭೂಮಿಯಲ್ಲಿ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ
Last Updated 5 ಆಗಸ್ಟ್ 2020, 20:49 IST
ಅಕ್ಷರ ಗಾತ್ರ

ಅಯೋಧ್ಯೆ: ‘ಶತಮಾನಗಳ ಕಾಯುವಿಕೆ ಕೊನೆಯಾಗಿದೆ’ ಎಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರಕ್ಕೆ ಬುಧವಾರ ಶಿಲಾನ್ಯಾಸ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.

ಭಾರತದ ಏಕತೆ ಮತ್ತು ವೈವಿಧ್ಯದ ತಂತು ಶ್ರೀರಾಮ ಎಂದು ಮೋದಿ ಬಣ್ಣಿಸಿದರು. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನರ ‘ಶತಮಾನ’ಗಳ ಹೋರಾಟವನ್ನು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಅವರು ಹೋಲಿಸಿದರು. ಸ್ವಾತಂತ್ರ್ಯದ ಹೋರಾಟದ ರೀತಿಯಲ್ಲಿಯೇ ರಾಮ ಮಂದಿರಕ್ಕಾಗಿ ಹಲವು ಮಂದಿಯ ತ್ಯಾಗ ಬಲಿದಾನವಾಗಿದೆ ಎಂದರು.

ಮೋದಿ ತಮ್ಮ ಭಾಷಣವನ್ನು ‘ಸಿಯಾವರ್‌ ರಾಮಚಂದ್ರ ಕಿ ಜೈ’ ಮತ್ತು ‘ಜೈ ಸಿಯಾ ರಾಮ್‌’ ಎಂಬ ಘೋಷಣೆಯೊಂದಿಗೆ ಆರಂಭಿಸಿದರು. ಕೊನೆಯಲ್ಲಿ ಕೂಡ ಅವರು ಈ ಘೋಷಣೆಗಳನ್ನು ಮೊಳಗಿಸಿದರು. ಸೀತೆಯನ್ನು ‘ಸಿಯಾ’ ಎಂದೂ ಕರೆಯಲಾಗುತ್ತದೆ.

‘ಪ್ರತಿಯೊಬ್ಬರ ವಿಶ್ವಾಸ ಮತ್ತು ಸಹಕಾರದಿಂದ ಪ್ರತಿಯೊಬ್ಬರ ಏಳಿಗೆಯನ್ನು ನಾವು ಸಾಧಿಸಬೇಕಿದೆ. ರಾಮನಲ್ಲಿ ವಿಶ್ವಾಸ ಇದ್ದಾಗ ಮಾನವ ಕುಲದ ಪ್ರಗತಿ ಆಗಿದೆ ಮತ್ತು ಈ ಮಾರ್ಗದಿಂದ ನಾವು ಆಚೀಚೆ ಸರಿದಾಗಲೆಲ್ಲ ವಿನಾಶ ಸಂಭವಿಸಿದೆ ಎಂಬುದನ್ನು ನಾವು ನೆ‍ನಪಿನಲ್ಲಿ ಇರಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ವರ್ಷಗಳಿಂದ ಡೇರೆಯಲ್ಲಿ ನೆಲೆಸಿರುವ ‘ರಾಮಲಲ್ಲಾ’ನಿಗೆ ಭವ್ಯ ಮಂದಿರ ಇಲ್ಲಿ ನಿರ್ಮಾಣವಾಗಲಿದೆ ಎಂದು ಅವರು ಘೋಷಿಸಿದರು.

ಮೋದಿಯವರು ಭೂಮಿಪೂಜೆ ನೆರವೇರಿಸಿದ ಕ್ಷಣವನ್ನು ದೇಶದಾದ್ಯಂತ ಜನರು ಟಿ.ವಿ. ವಾಹಿನಿಗಳ ಮೂಲಕ ಕಣ್ತುಂಬಿಕೊಂಡರು. ಹಿಂದೂ–ಮುಸ್ಲಿಮರ ನಡುವೆ ದಶಕಗಳ ಕಾಲ ಭಾರಿ ಸಂಘರ್ಷಕ್ಕೆ ಕಾರಣವಾಗಿದ್ದ ನಿವೇಶನ ವಿವಾದವನ್ನು ಸುಪ್ರೀಂ ಕೋರ್ಟ್‌ ಕಳೆದ ವರ್ಷ ಬಗೆಹರಿಸಿತ್ತು. ಹೀಗಾಗಿ, ರಾಮಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ.

ರಾಮಜನ್ಮಭೂಮಿ ಚಳವಳಿಯ ಮುಂದಾಳುತ್ವ ವಹಿಸಿದ್ದ ಎಲ್‌.ಕೆ. ಅಡ್ವಾಣಿ ಸೇರಿ ಹಲವು ನಾಯಕರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಇರಲಿಲ್ಲ. ಕೋವಿಡ್‌ ಕಾರಣದಿಂದಾಗಿ 175 ಗಣ್ಯರಿಗೆ ಮಾತ್ರ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಆಹ್ವಾನ ನೀಡಿತ್ತು.

ಉತ್ತರ‍ಪ್ರದೇಶದ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ರಾಮಜನ್ಮಭೂಮಿ ಟ್ರಸ್ಟ್‌ ಅಧ್ಯಕ್ಷ ನೃತ್ಯ ಗೋಪಾಲ ದಾಸ್‌ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್‌ನಲ್ಲಿ 'ಜೈ ಶ್ರೀರಾಮ್‌'

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಆಗುತ್ತಿದ್ದಂತೆಯೇ ಕಾಂಗ್ರೆಸ್‌ ಪಕ್ಷದ ನಿಲುವಿನಲ್ಲಿ ಗಮನಾರ್ಹವಾದ ಬದಲಾವಣೆ ಆಗಿದೆ. ಕಾಂಗ್ರೆಸ್‌ ಪಕ್ಷದ ಹಲವು ಮುಖಂಡರು ಮಂದಿರ ನಿರ್ಮಾಣಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಏನನ್ನೂ ಹೇಳಿಲ್ಲ. ಆದರೆ, ಅವರ ಮಕ್ಕಳಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ
ಗಾಂಧಿ ವಾದ್ರಾ ಅವರು ಮಂದಿರದ ಪರವಾಗಿ ಮಾತನಾಡಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ಶ್ರೀರಾಮನ ಗುಣವನ್ನು ಅವರು ಹಾಡಿ ಹೊಗಳಿದ್ದಾರೆ.

‘ಮರ್ಯಾದಾಪುರುಷೋತ್ತಮ ರಾಮನಲ್ಲಿ ಮಾನವೀಯ ಗುಣಗಳ ಅತ್ಯುತ್ತಮ ಅಂಶಗಳೆಲ್ಲವೂ ಮಿಳಿತವಾಗಿವೆ. ನಮ್ಮೆಲ್ಲರ ಮನದಲ್ಲಿ ಗಾಢವಾಗಿ ನೆಲೆಯೂರಿರುವ ಮಾನವೀಯ ಗುಣಗಳ ಅಭಿವ್ಯಕ್ತಿಯೇ ಶ್ರೀರಾಮ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷವು ರಾಮ ಮಂದಿರಕ್ಕೆ ಮಂಗಳವಾರವೇ ಬೆಂಬಲ ಸೂಚಿಸಿತ್ತು. ಅದಾದ ಬಳಿಕ ಕಾಂಗ್ರೆಸ್‌ನ ಹಿರಿ ಕಿರಿಯ ನಾಯಕರೆಲ್ಲರೂ ಮಂದಿರದ ಪರವಾಗಿ ಹೇಳಿಕೆ ನೀಡಿದ್ದಾರೆ. ಒಂದು ಕಾಲದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಿಜೆಪಿಯ ಘೋಷಣೆಯಾಗಿದ್ದ ‘ಜೈಶ್ರೀರಾಮ್‌’ ಈಗ ಕಾಂಗ್ರೆಸ್‌ನಲ್ಲಿಯೂ ಮೊಳಗುತ್ತಿದೆ.

ಶಾಂತಿಗಾಗಿ ಬಲಯುತ ಭಾರತ

‘ರಾಮಚರಿತಮಾನಸ’ವನ್ನು ಉಲ್ಲೇಖಿಸಿದ ಮಾತನಾಡಿದ ಮೋದಿ ಅವರು ಬಲವಾದ ದೇಶ ಮಾತ್ರ ಶಾಂತಿಗೆ ಕಾರಣವಾಗಬಲ್ಲುದು ಎಂದು ಹೇಳಿದ್ದಾರೆ. ‘ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ’ ಎಂದಿರುವ ಅವರು ಬಲವಾದ ಸೇನೆಯನ್ನು ಹೊಂದಿರುವ ದೇಶವು ಶಾಂತಿ ಸ್ಥಾಪಿಸಬಲ್ಲುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಗಡಿ ವಿಚಾರದಲ್ಲಿ ಭಾರತದ ಜತೆ ಜಗಳಕ್ಕೆ ನಿಂತಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ಇದು ಪರೋಕ್ಷ ಸಂದೇಶ ಎನ್ನಲಾಗಿದೆ.

ಶಕ್ತಿಯುತವಾಗಿ ಬೆಳೆಯುತ್ತಿದ್ದಷ್ಟು ದಿನ ಭಾರತವು ಶಾಂತಿ ಮತ್ತು ಸಂತಸದಿಂದ ಇರುತ್ತದೆ. ಶ್ರೀರಾಮನ ಈ ನೀತಿ ಮತ್ತು ಪದ್ಧತಿಯು ಹಲವು ವರ್ಷಗಳಿಂದ ಭಾರತದ ಮಾರ್ಗದರ್ಶಿಯಾಗಿದೆ ಎಂದು ಮೋದಿ ಹೇಳಿದರು.

ಪೂರ್ವ ಲಡಾಖ್‌ನ ಭಾರತದ ಕೆಲವು ಭೂಪ್ರದೇಶಕ್ಕೆ ಬಂದಿರುವ ಚೀನಾದ ಸೈನಿಕರು ಇನ್ನೂ ಹಿಂದಿರುಗಿಲ್ಲ. ಇಲ್ಲಿ, ಚಳಿಗಾಲದ ತಿಂಗಳಲ್ಲಿ ಸುದೀರ್ಘ ಮುಖಾಮುಖಿಗೆ ಭಾರತದ ಸೈನ್ಯವು ಸಜ್ಜಾಗಿದೆ. ಇನ್ನೊಂದೆಡೆ, ಜಮ್ಮು–ಕಾಶ್ಮೀರವನ್ನೂ ಸೇರಿಸಿಕೊಂಡು ಹೊಸ ನಕ್ಷೆ ಸಿದ್ಧಪಡಿಸಿರುವ ಪಾಕಿಸ್ತಾನವು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಎಲ್ಲ ಕಾರಣಗಳಿಂದ ಮೋದಿ ಅವರ ಈ ಹೇಳಿಕೆಯು ಮಹತ್ವ ಪಡೆದಿದೆ.

ಮುಸ್ಲಿಮರಲ್ಲಿ ಸಂಭ್ರಮ

ಅಯೋಧ್ಯೆ ಮತ್ತು ಫೈಜಾಬಾದ್‌ ನಗರಗಳ ಮುಸ್ಲಿಮರು, ಹಿಂದೂಗಳ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಚೌಕ್, ಸಾದಾತ್‌ಗಂಜ್‌, ದೊರಾಹಿ ಪ್ರದೇಶದಲ್ಲಿ ಮುಸ್ಲಿಮರು ಸಿಹಿ ಹಂಚಿದರು. ‘ಕೆಲ ವರ್ಷಗಳಲ್ಲಿಯೇ ಭವ್ಯ ರಾಮಮಂದಿರ ನಿರ್ಮಾಣ ಆಗಲಿದೆ. ಶ್ರೀರಾಮನು ಸಾಮಾಜಿಕ ಮತ್ತು ಕೋಮು ಸಾಮರಸ್ಯದ ಸಂಕೇತ’ ಎಂದು ಅಯೋಧ್ಯೆ ನಿವಾಸಿ ರವೂಫ್‌ ಖಾನ್‌ ಹೇಳಿದ್ದಾರೆ.

‘ಇದೊಂದು ಚಾರಿತ್ರಿಕ ಸಂದರ್ಭ. ಭಾರತದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಸಂಭ್ರಮಿಸಬೇಕು’ ಎಂದು ನಿವೇಶನ ವಿವಾದ ಪ್ರಕರಣದ ಅತಿ ಹಳೆಯ ಅರ್ಜಿದಾರ ಹಾಶಿಂ ಅನ್ಸಾರಿಯ ಮಗ ಇಕ್ಬಾಲ್‌ ಅನ್ಸಾರಿ ಹೇಳಿದ್ದಾರೆ. ಅನ್ಸಾರಿ ಅವರು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

* ಪ್ರತಿಯೊಬ್ಬರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ರಾಮಮಂದಿರದ ಇಟ್ಟಿಗೆಗಳನ್ನು ಪರಸ್ಪರ ಪ್ರೀತಿ ಮತ್ತು ಸಹೋದರತ್ವದಿಂದ ನಾವು ಜೋಡಿಸಬೇಕಿದೆ

-ನರೇಂದ್ರ ಮೋದಿ, ಪ್ರಧಾನಿ

* ಭೂಮಿಯಲ್ಲಿ ರಾಮತ್ವ ಸ್ಥಾಪನೆಯತ್ತ ನಾವು ಸಾಗಬೇಕಿದೆ. ದೇಶದಲ್ಲಿ ಬಡತನ, ಅಸಮಾನತೆ, ಅನಕ್ಷರತೆ, ನಿರುದ್ಯೋಗ ನಿರ್ಮೂಲನೆ ಆಗಬೇಕಿದೆ

- ಅಲೋಕ್‌ ಕುಮಾರ್‌, ವಿಎಚ್‌ಪಿ ಕಾರ್ಯಾಧ್ಯಕ್ಷ

* ರಾಮಮಂದಿರವು ಜನರಿಗೆ ಆತ್ಮವಿಶ್ವಾಸ ನೀಡಿದೆ. ಆತ್ಮನಿರ್ಭರ ಭಾರತಕ್ಕೆ ಇದು ಅಗತ್ಯ. ಪ್ರಗತಿ ಸಾಧ್ಯವಾಗ ಬೇಕಿದ್ದರೆ ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕು.

-ಮೋಹನ್‌ ಭಾಗವತ್‌, ಆರ್‌ಎಸ್‌ಎಸ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT