ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ಬದಲಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಆರಂಭಕ್ಕೆ ದಿನಗಣನೆ

Last Updated 26 ಫೆಬ್ರುವರಿ 2023, 11:16 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಧನ್ನಿಪುರ್‌ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ಇದ್ದ ಅಡ್ಡಿಗಳು ನಿವಾರಣೆಯಾಗಿ ಮಸೀದಿ ನಿರ್ಮಾಣ ಆರಂಭಕ್ಕೆ ದಿನಗಣನೆ ಶುರುವಾಗಿದೆ ಎನ್ನಲಾಗಿದೆ.

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸುವಂತೆ 2019ರಲ್ಲಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ್ದ ವೇಳೆ, ಮಸೀದಿ ನಿರ್ಮಿಸಲು ಜಿಲ್ಲೆಯೊಳಗೆ ಐದು ಎಕರೆ ಬದಲಿ ಭೂಮಿಯನ್ನು ಮಂಜೂರು ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿತ್ತು.

ಬದಲಿ ಭೂಮಿ ನೀಡುವ ವಿಚಾರವು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಬಳಿ ಇತ್ಯರ್ಥವಾಗದೇ ಬಾಕಿ ಉಳಿದಿದೆ. ಈ ಕುರಿತು ನಿರಕ್ಷೇಪಣಾ ಪತ್ರ (ಎನ್‌ಒಸಿಎಸ್‌) ದೊರೆತ ಕಾರಣ ಬದಲಿ ಭೂಮಿ ಮಂಜೂರು ಮಾಡುವ ಕುರಿತು ಈ ವಾರದ ಒಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಡಿಎ ಮುಖ್ಯಸ್ಥ ಮತ್ತು ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್‌ ದಯಾಳ್‌ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಬದಲಿ ಭೂಮಿ ವಿಚಾರ ಇತ್ಯರ್ಥಗೊಳಿಸುವಂತೆ ಸರ್ಕಾರದಿಂದ ನಮಗೆ ಸೂಚನೆ ದೊರೆತಿದೆ. ಬದಲಿ ಭೂಮಿ ವಿಚಾರವನ್ನು ನಾವು ಸೋಮವಾರ ಕೈಗೆತ್ತಿಕೊಳ್ಳಲಿದ್ದೇವೆ. ಈ ವಾರದೊಳಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಗೌರವ್‌ ಹೇಳಿದರು.

ಬದಲಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಮಾಡುವ ಹೊಣೆ ಹೊತ್ತುಕೊಂಡಿರುವ ಇಂಡೋ–ಇಸ್ಲಾಮಿಕ್‌ ಸಾಂಸ್ಕೃತಿಕ ಪ್ರತಿಷ್ಠಾನವು (ಐಐಸಿಎಫ್‌) ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಿಸಲು ಅನುಮತಿ ನೀಡಬೇಕೆಂದು 2020ರ ಜುಲೈನಲ್ಲಿ ಅರ್ಜಿ ಸಲ್ಲಿಸಿತ್ತು.

ಈ ಭೂಮಿಯಲ್ಲಿ ಮಸೀದಿ ಜೊತೆಗೆ ಗ್ರಂಥಾಲಯ, ಸಂಶೋಧನಾ ಕೇಂದ್ರ, ಆಸ್ಪತ್ರೆ, ಸಮುದಾಯದ ಪಾಕಶಾಲೆ ನಿರ್ಮಿಸುವ ಯೋಜನೆಯನ್ನು ಐಐಸಿಎಫ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT