ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರಿಯಂ ಇರುವ ಪಟಾಕಿಗಳ ನಿಷೇಧ | ಎಲ್ಲ ರಾಜ್ಯಗಳಿಗೂ ಆದೇಶ ಅನ್ವಯ: ಸುಪ್ರೀಂ ಕೋರ್ಟ್

Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಬೇರಿಯಂ ಇರುವ ಪಟಾಕಿಗಳ ಬಳಕೆ ನಿಷೇಧಿಸಿ ಹೊರಡಿಸಿರುವ ಆದೇಶ ರಾಷ್ಟ್ರ ರಾಜಧಾನಿ ದೆಹಲಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಂದು ರಾಜ್ಯವೂ ಈ ಆದೇಶವನ್ನು ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ವಾಯು ಮತ್ತು ಶಬ್ದ ಮಾಲಿನ್ಯ ತಡೆಗಟ್ಟುವುದಕ್ಕಾಗಿ ಸಾಂಪ್ರದಾಯಿಕ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಿ 2018ರಲ್ಲಿ ತಾನು ನೀಡಿದ್ದ ಆದೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಈ ಸ್ಪಷ್ಟನೆ ನೀಡಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವುದಕ್ಕೆ ಸಂಬಂಧಿಸಿ ತಾನು ಈ ಮೊದಲು ನೀಡಿದ್ದ ನಿರ್ದೇಶನಗಳನ್ನು ಪಾಲಿಸುವಂತೆ ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ಎಂ.ಎಂ.ಸುಂದ್ರೇಶ್‌ ಅವರಿದ್ದ ನ್ಯಾಯಪೀಠವು ರಾಜಸ್ಥಾನ ಸರ್ಕಾರಕ್ಕೆ ಇದೇ ಸಂದರ್ಭದಲ್ಲಿ ಸೂಚಿಸಿತು.

ಪಟಾಕಿಗಳನ್ನು ಸಿಡಿಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರನ್ನು ಸಂವೇದನಾಶೀಲರನ್ನಾಗಿ ಮಾಡುವುದು ಅಗತ್ಯ. ಅದರಲ್ಲೂ, ಮಾಲಿನ್ಯ ತಡೆಗಟ್ಟುವುದು ಹಾಗೂ ಪರಿಸರ ಸಂರಕ್ಷಣೆಯು ನ್ಯಾಯಾಲಯದ ಕರ್ತವ್ಯ ಎಂಬ ತಪ್ಪುಗ್ರಹಿಕೆ ಮನೆ ಮಾಡಿದೆ ಎಂದೂ ನ್ಯಾಯಪೀಠ ಹೇಳಿತು.

ಈ ವಿಷಯದಲ್ಲಿ ಜನರೇ ಮುಂದೆ ಬರಬೇಕು. ಪ್ರಸ್ತುತ, ಮಕ್ಕಳು ಪಟಾಕಿಗಳನ್ನು ಸುಡುವುದಿಲ್ಲ. ಈ ಪ್ರವೃತ್ತಿ ವಯಸ್ಕರಲ್ಲಿಯೇ ಹೆಚ್ಚು ಕಂಡುಬರುತ್ತದೆ ಎಂದೂ ಹೇಳಿತು.

ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸುವಂತೆ ಕೋರಿರುವ ಅರ್ಜಿಯೊಂದು ಬಾಕಿ ಇದ್ದು, ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ.

ದೀಪಾವಳಿ ಹಾಗೂ ಮದುವೆ ಸಮಾರಂಭಗಳ ಸಂದರ್ಭದಲ್ಲಿ ಉದಯಪುರ ನಗರದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವುದಕ್ಕಾಗಿ ಪಟಾಕಿಗಳ ಮೇಲೆ ನಿಷೇಧ ಹೇರುವಂತೆ ರಾಜಸ್ಥಾನ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

‘ಈ ವಿಚಾರವಾಗಿ ನ್ಯಾಯಾಲಯವು ಈಗಾಗಲೇ ಹಲವು ಆದೇಶಗಳನ್ನು ನೀಡಿದೆ. ಹೀಗಾಗಿ ಮಧ್ಯಂತರ ಅರ್ಜಿ ಕುರಿತಾಗಿ ನಿರ್ದಿಷ್ಟ ಆದೇಶ ಹೊರಡಿಸುವ ಅಗತ್ಯ ಇಲ್ಲ. ಈಗಾಗಲೇ ಹೊರಡಿಸಿರುವ ಆದೇಶವು ರಾಜಸ್ಥಾನ ಸೇರಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯ. ಹಬ್ಬಗಳ ಸಂದರ್ಭದಲ್ಲಿ ಮಾತ್ರವಲ್ಲ, ಅದರ ನಂತರವೂ ಈ ಆದೇಶದ ಪಾಲನೆಯಾಗಬೇಕು’ ಎಂದು ನ್ಯಾಯಪೀಠ ಸ್ಪಷ್ಪಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT