ಗುವಾಹಟಿ: ನೆರೆಯ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆದಿದ್ದು, ಅಸ್ಸಾಂನ ಭಾರತ–ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಭದ್ರತೆಯನ್ನು ಪರಿಶೀಲಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಗಡಿಯುದ್ದಕ್ಕೂ ಎಲ್ಲ ಹಂತದ ಕಮಾಂಡರ್‌ಗಳು ಹೆಚ್ಚಿನ ಜಾಗರೂಕತೆ ವಹಿಸುವಂತೆ ಗುವಾಹಟಿ ವ್ಯಾಪ್ತಿಯ ಬಿಎಸ್‌ಎಫ್ ಪಡೆಗೆ ಸೂಚಿಸಲಾಗಿದೆ. ಗುಪ್ತಚರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ಹೇಳಿದ್ದಾರೆ.
ಭಾರತ–ಬಾಂಗ್ಲಾದೇಶದ ನಡುವಿನ ಅಂತರರಾಷ್ಟ್ರೀಯ ಗಡಿಯು 4,096 ಕಿ.ಮೀ ದೂರ ಇದ್ದು, ಗುವಾಹಟಿಯ ಬಿಎಸ್‌ಎಫ್ ವ್ಯಾಪ್ತಿಗೆ 509 ಕಿ.ಮೀ. ಬರಲಿದೆ. ಈ ಗಡಿ ರಕ್ಷಣೆಗಾಗಿ 11 ಬೆಟಾಲಿಯನ್ ಹಾಗೂ ಜಲಯೋಧರ (ವಾಟರ್ ವಿಂಗ್) ತಂಡವೊಂದನ್ನು ನಿಯೋಜಿಸಲಾಗಿದೆ.