ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಭಾಷೆಗೆ ಅವಕಾಶ: ಐಬಿಪಿಎಸ್‌ ಪರೀಕ್ಷಾ ಪ್ರಕ್ರಿಯೆ ತಡೆ ಹಿಡಿದ ಕೇಂದ್ರ

Last Updated 13 ಜುಲೈ 2021, 15:29 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ಆಯೋಜಿಸುವ ನೇಮಕಾತಿ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅವಕಾಶ ನೀಡುವಂತೆ ಬೇಡಿಕೆ ಹೆಚ್ಚಿರುವ ಕಾರಣ ಪರಿಶೀಲನಾ ಸಮಿತಿ ರಚಿಸಿರುವ ಕೇಂದ್ರ ಸರ್ಕಾರ, ಪರೀಕ್ಷಾ ಪ್ರಕ್ರಿಯೆಗೆ ತಡೆ ನೀಡಿದೆ.

15 ದಿನಗಳಲ್ಲಿ ವರದಿ ನೀಡುವಂತೆ ಪರಿಶೀಲನಾ ಸಮಿತಿಗೆ ಸೂಚಿಸಲಾಗಿದೆ. ವರದಿ ಸಲ್ಲಿಕೆ ಆಗುವವರೆಗೆ ಈಗ ಆಯೋಜಿಸಲಾಗುತ್ತಿರುವ ಪರೀಕ್ಷೆಯನ್ನು ತಡೆ ಹಿಡಿಯಲಾಗುತ್ತದೆ ಎಂದು ಕೇಂದ್ರದ ಹಣಕಾಸು ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿರುವಂತೆಯೇ, ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿ ನೇಮಕಾತಿಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ರಾಜ್ಯದ ಅನೇಕರು ಆಗ್ರಹಿಸಿದ್ದರು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ) ಸಿಬ್ಬಂದಿ ನೇಮಕಾತಿ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುವುದು ಎಂದು 2019ರಲ್ಲಿ ಸಂಸತ್‌ನಲ್ಲಿ ಹೇಳಿಕೆ ನೀಡಿದ್ದ ಹಣಕಾಸು ಸಚಿವರು ನಂತರ ಅವಕಾಶ ನೀಡಿದ್ದರು.

ಆದರೆ, ‘ದೇಶದಲ್ಲಿ 22 ಅಧಿಕೃತ ಭಾಷೆಗಳಿದ್ದರೂ ಇಂಗ್ಲಿಷ್‌ ಮತ್ತು ಹಿಂದಿ ಭಾಷಿಕರಿಗೆ ಅವಕಾಶ ನೀಡುವ ಸಂಬಂಧ ಪ್ರಾದೇಶಿಕ ಭಾಷೆಗಳಲ್ಲಿ ಐಬಿಪಿಎಸ್‌ ಪರೀಕ್ಷೆ ಬರೆಯಲು ನೀಡಿದ್ದ ಅವಕಾಶವನ್ನು ದಿಢೀರ್‌ ಬದಲಿಸಲಾಗಿದೆ ಎಂಬಂತೆ ಕೆಲವರು ತಪ್ಪು ಹೇಳಿಕೆ ನೀಡುತ್ತಿದ್ದಾರೆ. ಅದು ಸರಿಯಲ್ಲ ಎಂದು ಸಚಿವಾಲಯ ತಿಳಿಸಿದೆ.

ಕೇವಲ ಆರ್‌ಆರ್‌ಬಿಗಳ ಆಫೀಸ್‌ ಅಸಿಸ್ಟಂಟ್‌ ಹಾಗೂ ಆಫೀಸರ್ ಸ್ಕೇಲ್– I ನೇಮಕಾತಿಗಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲದೆ, ಕೊಂಕಣಿ ಮತ್ತು ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಈಗಲೂ ಆ ನೇಮಕಾತಿ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲೇ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಗ್ರಾಮೀಣ ಬ್ಯಾಂಕ್‌ಗಳಲ್ಲಿ ನಡೆಯುವ ನೇಮಕಾತಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಅದೇ ಪದ್ಧತಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ ನೇಮಕಾತಿ ಪರೀಕ್ಷೆಗಳನ್ನೂ ಅನುಸರಿಸಬೇಕು ಎಂದು ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಕೋರಿದ್ದರು.

ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದ ನರೇಂದ್ರ ಮೋದಿ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆಯುತ್ತ ಬಂದಿದೆ. ಐಬಿಪಿಎಸ್‌ನ ಇತ್ತೀಚಿನ ಸುತ್ತೋಲೆಯ ಮೂಲಕ ಕನ್ನಡ ನಾಡಿಗೆ ದ್ರೋಹ ಎಸಗಲಾಗಿದೆ. ಕೂಡಲೇ ಈ ಅನ್ಯಾಯ ಸರಿಪಡಿಸಬೇಕು ಎಂದು ಕೋರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT