ಬರೇಲಿ, ಉತ್ತರ ಪ್ರದೇಶ: ಶಾಹಿ– ಶೀಶ್‌ಗಢ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಂಬತ್ತು ಮಹಿಳೆಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೇಲಿ ಜಿಲ್ಲಾ ಪೊಲೀಸರು ಶಂಕಿತ ಸರಣಿ ಕೊಲೆಗಾರನ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ.
ರೇಖಾಚಿತ್ರದಲ್ಲಿ ಹೋಲುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೇ ಕೂಡಲೇ ಮಾಹಿತಿ ನೀಡಲು ವಿನಂತಿ ಮಾಡಿಕೊಂಡಿದ್ದಾರೆ.
ಶಾಹಿ– ಶೀಶ್‌ಗಢ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಂಬತ್ತು ಮಹಿಳೆಯರ ಕೊಲೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪೊಲೀಸರು ಈ ಕೊಲೆಗಳನ್ನು ಬೇರೆ ಬೇರೆಯವರು ಮಾಡಿರಬಹುದು ಎಂದು ಮೊನ್ನೆ ಅಂದಾಜಿಸಿದ್ದರು. ಆದರೆ, ಸದ್ಯ ಈ ಎಲ್ಲ ಕೊಲೆಗಳನ್ನು ಒಬ್ಬನೇ ಮಾಡಿರಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಂತಕ ಕಬ್ಬಿನ ಗದ್ದೆಯಲ್ಲಿ ಸೀರೆ ಬಳಸಿ ಕುತ್ತಿಗೆಗೆ ಸುತ್ತಿ ಮಹಿಳೆಯರನ್ನು ಕೊಲೆ ಮಾಡುತ್ತಿದ್ದ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದಿರುವ ಕುರುಹುಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲ ಮೃತದೇಹಗಳು ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕೊಲೆಗಳನ್ನು ಒಬ್ಬನೇ ವ್ಯಕ್ತಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸರಣಿ ಹಂತಕನ ಪತ್ತೆಗೆ ಹುಡುಕಾಟ ತೀವ್ರಗೊಳಿಸಿದ್ದಾರೆ.
ಬರೇಲಿಯ ಐಜಿಪಿ ರಾಕೇಶ್ ಸಿಂಗ್ ಅವರು ಸ್ವತಃ ತನಿಖೆಯ ನೇತೃತ್ವ ವಹಿಸಿಕೊಂಡಿದ್ದಾರೆ. ‘ಎಲ್ಲಾ ಒಂಬತ್ತು ಕೊಲೆಗಳಲ್ಲಿ ಸಾಮ್ಯತೆ ಇವೆ. ಸ್ಥಳೀಯ ಪೊಲೀಸರಿಗೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ. ಈ ನಿಷ್ಕ್ರಿಯತೆ ಮುಂದುವರಿಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.