ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ. ಬಂಗಾಳ | ಹೋರಾಟ ಹತ್ತಿಕ್ಕುವ ಪೊಲೀಸ್ ಕ್ರಮಕ್ಕೆ ಖಂಡನೆ: ಮುಷ್ಕರಕ್ಕೆ BJP ಕರೆ

Published 27 ಆಗಸ್ಟ್ 2024, 13:21 IST
Last Updated 27 ಆಗಸ್ಟ್ 2024, 13:21 IST
ಅಕ್ಷರ ಗಾತ್ರ

ಕೋಲ್ಕತ್ತ: ನಬನ್ನಾ ಅಭಿಜನ್ ರ್‍ಯಾಲಿ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರ ಕ್ರಮವನ್ನು ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಬುಧವಾರ (ನಾಳೆ) 12 ಗಂಟೆಗಳ ಸಾರ್ವತ್ರಿಕ ಮುಷ್ಕರಕ್ಕೆ ಬಿಜೆಪಿ ಕರೆ ನೀಡಿದೆ.

ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಸಾರ್ವತ್ರಿಕ ಮುಷ್ಕರ ನಡೆಸಲು ಬಿಜೆಪಿ ಮುಂದಾಗಿದೆ. ಆದರೆ ಯಾವುದೇ ಮುಷ್ಕರಕ್ಕೆ ಅನುಮತಿ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.

'ಸರ್ಕಾರ ಯಾವುದೇ ಬಂದ್‌ಗೆ ಅವಕಾಶ ನೀಡುವುದಿಲ್ಲ. ಮುಷ್ಕರದಲ್ಲಿ ಭಾಗವಹಿಸದಂತೆ ನಾವು ಜನರಲ್ಲಿ ಮನವಿ ಮಾಡುತ್ತೇವೆ. ಜನ ಜೀವನಕ್ಕೆ ತೊಂದರೆಯಾಗದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಆಲಾಪನ್ ಬಂಡೋಪಾಧ್ಯಾಯ ಹೇಳಿದ್ದಾರೆ.

ಸಾರಿಗೆ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಅಂಗಡಿ, ಮಾರುಕಟ್ಟೆಗಳು ತೆರೆದಿರಲಿವೆ. ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗುವಂತೆ ಬಂಡೋಪಾಧ್ಯಾಯ ಮನವಿ ಮಾಡಿದ್ದಾರೆ.

‘ಈ ಸರ್ವಾಧಿಕಾರಿ ಸರ್ಕಾರವು ಜನರ ದನಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ನಾವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಬಂದ್ ಆಚರಿಸುವಂತೆ ಕರೆ ನೀಡಬೇಕಾಗಿದೆ’ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಸುಕಾಂತ ಮಜುಮ್‌ದಾರ್‌ ಹೇಳಿದ್ದಾರೆ.

ಕೋಲ್ಕತ್ತದ ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿ ‘ಪಶ್ವಿಮ್‌ ಬಂಗಾ ಛತ್ರ ಸಮಾಜ’ ವಿದ್ಯಾರ್ಥಿ ಸಂಘಟನೆ ಮತ್ತು ರಾಜ್ಯ ಸರ್ಕಾರಿ ನೌಕರರ ವೇದಿಕೆ 'ಸಂಗ್ರಾಮಿ ಜೌತ ಮಂಚ' ನಬನ್ನಾ ಅಭಿಜನ್ ರ್‍ಯಾಲಿಗೆ ಕರೆ ನೀಡಿದ್ದವು.

ಹೌರಾ ಮೈದಾನದ ಬಳಿ ರ್‍ಯಾಲಿ ನಡೆಸುತ್ತಿದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ, ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

‘ಛಾತ್ರ ಸಮಾಜ ಪ್ರಾಯೋಜಿತ ನಬನ್ನಾ ಅಭಿಯಾನ್‌ಗೆ ಬಿಜೆಪಿಯ ಬೆಂಬಲ ಇದೆ ಎಂಬುದನ್ನು ನಾವು ಹಿಂದಿನಿಂದಲೂ ಹೇಳುತ್ತಿದ್ದೇವೆ. ವಿದ್ಯಾರ್ಥಿಗಳ ವೇಷದಲ್ಲಿದ್ದ ಕಿಡಿಗೇಡಿಗಳು ಭಾರಿ ಪ್ರಮಾಣದಲ್ಲಿ ತೊಂದರೆ ಸೃಷ್ಟಿಸಿದ್ದನ್ನು ಕಂಡಾಗ ಇದು ಗೊತ್ತಾಗುತ್ತದೆ’ ಎಂದು ಟಿಎಂಸಿ ಹಿರಿಯ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಶಾಂತಿಯುತ ಪ್ರತಿಭಟನಕಾರರನ್ನು ಈ ರೀತಿ ನಡೆಸಿಕೊಂಡರೆ ನಾವು ಇಡೀ ರಾಜ್ಯವನ್ನು ಬಂದ್ ಮಾಡಿಸುತ್ತೇವೆ
ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ
ಬುಧವಾರ ಬಂದ್‌ಗೆ ಅವಕಾಶ ಕೊಡುವುದಿಲ್ಲ. ಜನರು ಬಂದ್‌ನಲ್ಲಿ ಭಾಗಿಯಾಗಬಾರದು ಎಂದು ನಾವು ಒತ್ತಾಯಿಸುತ್ತಿದ್ದೇವೆ
ಆಲಾಪನ್ ಬಂದೋಪಾಧ್ಯಾಯ ಮುಖ್ಯಮಂತ್ರಿಯವರ ಮುಖ್ಯ ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT