‘ಆಡಳಿತದ ಮೇಲೆ ಡ್ರಗ್ಸ್ ಮಾಫಿಯಾ ಪ್ರಭಾವ’
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಡ್ರಗ್ಸ್ ಮಾಫಿಯಾದವರು ಆಡಳಿತದ ಮೇಲೆ ಪ್ರಭಾವ ಬೀರುತ್ತಿವೆ. ಮಂತ್ರಿಗಳಿಗೆ ಹತ್ತಿರ ಇರುವವರು ಮತ್ತು ಇವರ ಪಕ್ಷದ ಪದಾಧಿಕಾರಿಗಳೇ ಈ ಕೃತ್ಯಗಳಲ್ಲಿ ಶಾಮೀಲಾಗಿರುವ ಶಂಕೆ ಇದೆ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ವಿವಿಧ ರೀತಿಯ ಮಾದಕ ವಸ್ತುಗಳು ತಯಾರಾಗಿ ಸಾಗಣೆ ಮತ್ತು ಮಾರಾಟ ಆಗುತ್ತಿವೆ. ಆದರೆ ಇದನ್ನು ತಡೆಗಟ್ಟುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ’ ಎಂದು ಕಿಡಿಕಾರಿದರು. ‘ಮಹಾರಾಷ್ಟ್ರ ಪೊಲೀಸರು ಕಲಬುರಗಿ ಮೈಸೂರಿಗೆ ಬಂದು ದಾಳಿ ನಡೆಸುತ್ತಾರೆ. ಮಹಾರಾಷ್ಟ್ರ ಪೊಲೀಸರಿಗೆ ಡ್ರಗ್ಸ್ ಫ್ಯಾಕ್ಟರಿ ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ಆದರೆ ನಮ್ಮ ಪೊಲೀಸರಿಗೆ ಮಾಹಿತಿಯೇ ಇಲ್ಲ. ಗೃಹ ಸಚಿವರು ಮಾತ್ರ ತಮಗೆ ಏನೂ ಗೊತ್ತಿಲ್ಲ ಪರಿಶೀಲಿಸುತ್ತೇನೆ ನೋಡುತ್ತೇನೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಇವರು ರಾಜೀನಾಮೆ ಕೊಡುವುದು ಸೂಕ್ತ’ ಎಂದರು.