ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2ನೇ ಬಾರಿಗೆ ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆ

Last Updated 10 ಡಿಸೆಂಬರ್ 2022, 9:45 IST
ಅಕ್ಷರ ಗಾತ್ರ

ಅಹಮದಾಬಾದ್: ಸತತ ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಮುಂದುವರಿಯಲಿದ್ದಾರೆ.

ಶನಿವಾರ ಅಹಮದಾಬಾದ್‌ನ ಬಿಜೆಪಿ ಕಚೇರಿ ‘ಕಮಲಂ’ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಗುಜರಾತ್‌ನ ಬಿಜೆಪಿ ಶಾಸಕರು ಭೂಪೇಂದ್ರ ಪಟೇಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ಧಾರೆ.

‘ಹೊಸದಾಗಿ ಆಯ್ಕೆಯಾದ ಶಾಸಕರು ಬಿಜೆಪಿ ಕಚೇರಿ ಕಮಲಂನಲ್ಲಿ ಸಭೆ ಸೇರಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಲಾಗಿದ್ದ ಭೂಪೇಂದ್ರ ಪಟೇಲ್ ಅವರ ಹೆಸರನ್ನು ಅವಿರೋಧವಾಗಿ ಅಂಗೀಕರಿಸಿದ್ದಾರೆ’ಎಂದು ಗುಜರಾತ್ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 156ರಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿತ್ತು. ಹೊಸ ಸರ್ಕಾರ ರಚನೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ 60 ವರ್ಷದ ಭೂಪೇಂದ್ರ ಪಟೇಲ್, ಶುಕ್ರವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಿಜೆಪಿಯ ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಬಿ.ಎಸ್. ಯಡಿಯೂರಪ್ಪ ಮತ್ತು ಅರ್ಜುನ್ ಮುಂಡಾ ಅವರು ಕೇಂದ್ರದ ವೀಕ್ಷಕರಾಗಿ ಶಾಸಕಾಂಗ ಸಭೆಯಲ್ಲಿ ಹಾಜರಿದ್ದರು.

ಅಹಮದಾಬಾದ್ ಜಿಲ್ಲೆಯ ಘಟ್ಲೋಡಿಯಾ ಕ್ಷೇತ್ರದಿಂದ ಭೂಪೇಂದ್ರ ಪಟೇಲ್ 1.92 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಜಯ್ ರೂಪಾನಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT