ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ: ಕಾಂಗ್ರೆಸ್ ಸರ್ಕಾರದ ನಿಲುವನ್ನೇ ಅಸ್ತ್ರವಾಗಿಸಿ ಬಿಜೆಪಿ ತಿರುಗೇಟು

ರಾಹುಲ್‌ ಗಾಂಧಿ ಬೂಟಾಟಿಕೆ ಬಯಲು– ಟೀಕೆ
Last Updated 19 ಏಪ್ರಿಲ್ 2023, 14:52 IST
ಅಕ್ಷರ ಗಾತ್ರ

ನವದೆಹಲಿ: ಜಾತಿ ಗಣತಿ ನಡೆಸಬೇಕು ಎಂದು ಆಗ್ರಹಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ, ಇದೇ ವಿಷಯವಾಗಿ ಈ ಹಿಂದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ತಳೆದಿದ್ದ ನಿಲುವನ್ನು ನೆನಪಿಸುವ ಮೂಲಕ ಬಿಜೆಪಿ ಬುಧವಾರ ತಿರುಗೇಟು ನೀಡಿದೆ.

ಜಾತಿ ಗಣತಿ ನಡೆಸುವಂತೆ ಆಗ್ರಹಿಸಿರುವುದು ರಾಹುಲ್‌ ಗಾಂಧಿ ಅವರ ಬೂಟಾಟಿಕೆಯನ್ನು ಬಹಿರಂಗಪಡಿಸಿದೆ ಎಂದೂ ಬಿಜೆಪಿ ಟೀಕಿಸಿದೆ.

‘ಜಾತಿ ಗಣತಿ ಕುರಿತು ಆಗಿನ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಅಜಯ್ ಮಾಕನ್ ಅವರು 2010ರಲ್ಲಿ ರಾಜ್ಯಸಭಾ ಸಂಸದ ಅಲಿ ಅನ್ವರ್‌ ಅವರಿಗೆ ಪತ್ರ ಬರೆದಿದ್ದರು. ಜಾತಿ ಆಧಾರದ ಮೇಲೆ ಸಮುದಾಯದಲ್ಲಿ ಭೇದ–ಭಾವ ಹುಟ್ಟುಹಾಕುವುದನ್ನು ಉತ್ತೇಜಿಸಬಾರದು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಜಾತ್ಯತೀತ ರಾಷ್ಟ್ರ ಆಶಯವನ್ನು ಗಮನದಲ್ಲಿಟ್ಟುಕೊಂಡು ಇಂಥ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಪತ್ರದಲ್ಲಿ ಬರೆಯಲಾಗಿತ್ತು’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾತಿ ಗಣತಿ ಮಾಡಲಾಗಿತ್ತು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಅವರು ಈ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಿರಲಿಲ್ಲ ಎಂದೂ ಬಿಜೆಪಿ ಮುಖಂಡರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು ಎಂದು ಮಂಡಲ ಆಯೋಗವು ಶಿಫಾರಸು ಮಾಡಿತ್ತು. ಆಯೋಗದ ಈ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿ 1990ರಲ್ಲಿ ಸಂಸತ್‌ನಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಅಂದಿನ ಪ್ರಧಾನಿ ವಿ.ಪಿ.ಸಿಂಗ್‌ ನೇತೃತ್ವ ಸರ್ಕಾರದ ವಿರುದ್ಧ ರಾಜೀವ್‌ ಗಾಂಧಿ ವಾಗ್ದಾಳಿ ನಡೆಸಿದ್ದರು’.

‘ಇದು ದೇಶವನ್ನು ಜಾತಿಗಳ ಆಧಾರದ ಮೇಲೆ ಒಡೆಯುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ರಾಜೀವ್‌ ಗಾಂಧಿ ಅವರು, ಬ್ರಿಟಿಷರು ಮಾಡಿದ್ದಕ್ಕಿಂತ ಈ ನಡೆ ಭಿನ್ನವೇನೂ ಇಲ್ಲ ಎಂದು ಆರೋಪಿಸಿದ್ದರು’ ಎಂಬುದಾಗಿ ಬಿಜೆಪಿ ಹೇಳಿದೆ ಎಂದು ಮೂಲಗಳು ತಿಳಿಸಿವೆ.

‘2010ರಲ್ಲಿ, ಜಾತಿ ಗಣತಿ ನಡೆಸುವುದಕ್ಕೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಪ್ರಣವ್‌ ಮುಖರ್ಜಿ ನೇತೃತ್ವದ ಸಚಿವರ ಗುಂಪು ಈ ವಿಷಯವಾಗಿ ಆಗ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ’ ಎನ್ನುವ ಮೂಲಕ ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT