ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಿಜೆಪಿ, ಎಸ್ಪಿ ನಡುವೆ ಕೆಸರೆರಚಾಟ

Published : 5 ಆಗಸ್ಟ್ 2024, 0:14 IST
Last Updated : 5 ಆಗಸ್ಟ್ 2024, 0:14 IST
ಫಾಲೋ ಮಾಡಿ
Comments

ಅಯೋಧ್ಯೆ (ಉತ್ತರಪ್ರದೇಶ):‌ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 12 ವರ್ಷದ ಬಾಲಕಿಯ ಕುಟುಂಬದ ಸದಸ್ಯರನ್ನು ಭಾನುವಾರ ಭೇಟಿಯಾದ ಬಿಜೆಪಿಯ ಮೂವರು ಸದಸ್ಯರನ್ನು ಒಳಗೊಂಡ ನಿಯೋಗವು ವಿಸ್ತೃತ ಚರ್ಚೆ ನಡೆಸಿತು.

‘ರಾಜ್ಯಸಭಾ ಸಂಸದೆ ಸಂಗೀತಾ ಬಲವಂತ್‌, ಉತ್ತರ ಪ್ರದೇಶ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ನರೇಂದ್ರ ಕಶ್ಯಪ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ತಂಡ ಸಂಗ್ರಹಿಸಿದ ವರದಿಯನ್ನು ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಅಧ್ಯಕ್ಷ ಕೆ.ಲಕ್ಷ್ಮಣ್‌ ಅವರಿಗೆ ವರದಿ ಸಲ್ಲಿಸಲಿದೆ’ ಎಂದು ರಾಜ್ಯಸಭಾ ಸಂಸದ ಬಾಬುರಾಮ್‌ ನಿಶಾದ್‌ ಅವರು ಭೇಟಿಯ ಬಳಿಕ ತಿಳಿಸಿದರು.

‘ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೊಯಿದ್‌ ಖಾನ್‌ ಪ್ರಮುಖ ಆರೋಪಿಯಾಗಿದ್ದು, ಸಮಾಜವಾದಿ ಪಕ್ಷದ ಸದಸ್ಯನಾಗಿದ್ದಾನೆ. ಫೈಜಾಬಾದ್‌ ಸಂಸದ ಅವಧೇಶ್ ಪ್ರಸಾದ್‌ ತಂಡದಲ್ಲಿಯೂ ಗುರುತಿಸಿಕೊಂಡಿದ್ದಾನೆ’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದರು.‌

‘ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಾಯಿ ಹಾಗೂ ಕುಟುಂಬದ ಇತರೆ ಸದಸ್ಯರನ್ನು ಭೇಟಿಯಾಗಿ ಸಮಗ್ರ ಮಾಹಿತಿ ಪಡೆದಿದ್ದು, ಸರ್ಕಾರದಿಂದ ಆರೋಪಿ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ವಿರುದ್ಧ ತಳಮಟ್ಟದಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ನಿಶಾದ್‌ ವಿವರಿಸಿದರು.

‘ಆರೋಪಿ ವಿರುದ್ಧ ಸರ್ಕಾರ ತೆಗೆದುಕೊಂಡ ಕಾನೂನು ಕ್ರಮಗಳ ಕುರಿತು ಕುಟುಂಬದ ಸದಸ್ಯರು ಸಂತೃಪ್ತರಾಗಿದ್ದಾರೆ’ ಎಂದರು.

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಯೋಧ್ಯೆ ಜಿಲ್ಲೆಯ ಬಾದರಸಾ ನಗರದಲ್ಲಿ ಬೇಕರಿ ನಡೆಸುತ್ತಿದ್ದ ಆರೋಪಿಗಳಾದ ಮೊಯಿದ್‌ ಖಾನ್‌, ಆತನ ನೌಕರ ರಾಜು ಖಾನ್‌ನನ್ನು ಜುಲೈ 30ರಂದು ಪೊಲೀಸರು ಬಂಧಿಸಿದ್ದರು.

ಎರಡು ತಿಂಗಳ ಹಿಂದೆ ಇಬ್ಬರೂ ಸೇರಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ನಂತರ ಈ ಕೃತ್ಯವನ್ನು ವಿಡಿಯೊ ಮಾಡಿಟ್ಟುಕೊಂಡಿದ್ದರು. ಇತ್ತೀಚಿಗೆ ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ ವೇಳೆ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು.

‘ಅಯೋಧ್ಯೆಯಲ್ಲಿ ಈ ಪ್ರಕರಣ ನಡೆದಿದೆ. ಆರೋಪಿಯು ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಆತನ ವಿರುದ್ಧ ಪಕ್ಷವೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಗುರುವಾರ ಅಧಿವೇಶನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಹಿತಿ ನೀಡಿದ್ದರು.

ಬೇಕರಿ ನೆಲಸಮ: ಅಯೋಧ್ಯಾ ಜಿಲ್ಲಾಡಳಿತವು ಖಾನ್‌ಗೆ ಸೇರಿದ ಬೇಕರಿಯನ್ನು ಶನಿವಾರ ಒಡೆದುಹಾಕಿತ್ತು.

‘ಕಾನೂನುಬಾಹಿರವಾಗಿ ನೀರಿನ ಕೊಳದ ಮೇಲೆ ಅಕ್ರಮವಾಗಿ ಬೇಕರಿಯನ್ನು ನಿರ್ಮಿಸಿದ್ದರಿಂದ ಒಡೆದುಹಾಕಲಾಗಿದೆ’ ಎಂದು ಅಯೋಧ್ಯೆ ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್‌ ತಿಳಿಸಿದರು.

ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಮೊಯಿದ್‌ ಖಾನ್‌ಗೆ ಸೇರಿದ ಬೇಕರಿಯನ್ನು ಜಿಲ್ಲಾಡಳಿತ ಹೊಡೆದುರುಳಿಸಿತು– ಪಿಟಿಐ ಚಿತ್ರ
ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಮೊಯಿದ್‌ ಖಾನ್‌ಗೆ ಸೇರಿದ ಬೇಕರಿಯನ್ನು ಜಿಲ್ಲಾಡಳಿತ ಹೊಡೆದುರುಳಿಸಿತು– ಪಿಟಿಐ ಚಿತ್ರ
‘ಗೂಂಡಾಗಿರಿ ಅರಾಜಕತೆಯೇ ಎಸ್ಪಿ ಡಿಎನ್‌ಎ’
ಬಲ್ಲಿಯಾ: ‘ಅಯೋಧ್ಯೆಯಲ್ಲಿ ನಡೆದ ಅತ್ಯಾಚಾರದ ಅಪರಾಧಿಗಳಿಗೆ ಮುಂದಿನ ಪೀಳಿಗೆಯೂ ನೆನಪಿಟ್ಟುಕೊಳ್ಳುವಷ್ಟು ಶಿಕ್ಷೆ ನೀಡಲಾಗುವುದು’ ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ಬೃಜೇಶ್‌ ಪಾಠಕ್‌ ಎಚ್ಚರಿಕೆ ನೀಡಿದ್ದಾರೆ. ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸಬೇಕು ಅತ್ಯಾಚಾರ ಸಂತ್ರಸ್ತೆಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಸಿಂಗ್‌ ಯಾದವ್‌ ಆಗ್ರಹಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಠಕ್‌ ‘ಗೂಂಡಾಗಿರಿ ಅರಾಜಕತೆಯು ಸಮಾಜವಾದಿ ಪಕ್ಷದ ಡಿಎನ್‌ಎ ಆಗಿದೆ’ ಎಂದರು. ‘ಕೊಲೆಗಡುಕರು ಹಾಗೂ ಅತ್ಯಾಚಾರಿಗಳಿಗೆ ರಕ್ಷಣೆ ನೀಡುವುದು ಸಮಾಜವಾದಿ ಪಕ್ಷದ ಹಳೆಯ ಚಾಳಿಯಾಗಿದೆ’ ಎಂದು ಈ ವೇಳೆ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT