ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಎಎಪಿ ಶಾಸಕರಿಗೆ ತಲಾ ₹25 ಕೋಟಿಯ ಆಮಿಷ ಒಡ್ಡಿದ ಬಿಜೆಪಿ: ಕೇಜ್ರಿವಾಲ್ ಆರೋಪ

Published 27 ಜನವರಿ 2024, 9:35 IST
Last Updated 27 ಜನವರಿ 2024, 9:35 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯು ಶಾಸಕರ ಖರೀದಿಯಲ್ಲಿ ತೊಡಗಿದ್ದು, ನಮ್ಮ ಪಕ್ಷದ ಏಳು ಮಂದಿ ಶಾಸಕರಿಗೆ ತಲಾ ₹25 ಕೋಟಿಯ ಆಮಿಷ ಒಡ್ಡುವ ಮೂಲಕ ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಎಎಎಪಿ ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿರುವ ಕುರಿತು ಕೇಜ್ರಿವಾಲ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಮ್ಮ ಶಾಸಕರಿಗೆ ಕರೆ ಮಾಡಿರುವ ವ್ಯಕ್ತಿಯೊಬ್ಬರು ತಮ್ಮೊಂದಿಗೆ 21 ಮಂದಿ ಎಎಪಿ ಶಾಸಕರು ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ದೆಹಲಿ ಸರ್ಕಾರ ಪತನಗೊಂಡ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಸಕರಿಗೆ ತಲಾ ₹25 ಕೋಟಿ ಹಣ ಮತ್ತು ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಾರೆ.

ನಮ್ಮ ಶಾಸಕರು ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ‘ನಮ್ಮ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಅಬಕಾರಿ ಹಗರಣದಲ್ಲಿ ಎಎಪಿ ನಾಯಕರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ದೆಹಲಿಯಲ್ಲಿ ನಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಕಳೆದ ಒಂಬತ್ತು ವರ್ಷಗಳಲ್ಲಿ ಹಲವಾರು ಪಿತೂರಿಗಳನ್ನು ನಡೆಸಿದ್ದರು. ಆದರೆ, ಅವೆಲ್ಲವೂ ವಿಫಲವಾಗಿವೆ ಎಂದು ಹೇಳಿದ್ದಾರೆ.

ಇತ್ತ ಕೇಜ್ರಿವಾಲ್ ಆರೋಪವನ್ನು ತಳ್ಳಿಹಾಕಿರುವ ದೆಹಲಿ ಬಿಜೆಪಿ ಕಾರ್ಯದರ್ಶಿ ಹರೀಶ್ ಖುರಾನಾ, ಎಎಪಿ ಶಾಸಕರು ಮತ್ತು ಅವರನ್ನು ಸಂಪರ್ಕಿಸಿದವರ ಹೆಸರನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದಾರೆ.

ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಇಡಿ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಗಮನ ಬೇರೆಡೆ ಸೆಳೆಯಲು ಬಿಜೆಪಿ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಖುರಾನಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT