ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ₹4 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಗುರುವಾಯೂರು, ತ್ರಿಪ್ರಯಾರ್ ದೇವಾಲಯಗಳಿಗೆ ಮೋದಿ ಭೇಟಿ
Published 17 ಜನವರಿ 2024, 15:43 IST
Last Updated 17 ಜನವರಿ 2024, 15:43 IST
ಅಕ್ಷರ ಗಾತ್ರ

ಕೊಚ್ಚಿ/ ತ್ರಿಶ್ಯೂರ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವಾರಗಳ ಅವಧಿಯಲ್ಲಿ ಎರಡನೇ ಬಾರಿ ಕೇರಳಕ್ಕೆ ಭೇಟಿ ನೀಡಿ ರೋಡ್‌ ಶೋ, ದೇವಾಲಯಗಳ ಭೇಟಿ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. 

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ವಿರೋಧ ಪಕ್ಷಗಳ ಪ್ರಾಬಲ್ಯವಿರುವ ಕೇರಳದ ಮೇಲೆ ಹೆಚ್ಚಿನ ಗಮನ ನೀಡಲಿರುವುದನ್ನು ಪ್ರಧಾನಿ ಅವರ ಭೇಟಿ ಸ್ಪಷ್ಟಪಡಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಮಂಗಳವಾರ ಸಂಜೆ ಕೊಚ್ಚಿಗೆ ಬಂದಿಳಿದ ಪ್ರಧಾನಿ, ರೋಡ್‌ ಶೋದಲ್ಲಿ ಭಾಗಿಯಾದರು. ಕೊಚ್ಚಿಯ ಕೆಪಿಸಿಸಿ ಜಂಕ್ಷನ್‌ನಿಂದ ನಡೆದ 1.3 ಕಿ.ಮೀ ದೂರದ ರೋಡ್‌ ಶೋ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ರಸ್ತೆಯ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರಧಾನಿ ಅವರು ಜನವರಿ 3 ರಂದು ತ್ರಿಶ್ಯೂರ್‌ನಲ್ಲಿ ರೋಡ್‌ ಶೋ ಕೈಗೊಂಡಿದ್ದರು.

ಬುಧವಾರ ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ  ಭಾಗವಹಿಸಿದರು. ಬೆಳಿಗ್ಗೆ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಆ ಬಳಿಕ ತ್ರಿಶ್ಯೂರ್‌ನ ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. 

ವಿವಿಧ ಯೋಜನೆಗಳಿಗೆ ಚಾಲನೆ:

ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್‌ನಲ್ಲಿ ಹೊಸ ಸೌಲಭ್ಯಗಳು ಸೇರಿದಂತೆ ₹ 4,000 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಿರುವ 310 ಮೀ. ಉದ್ದದ ನೌಕಾ ಜೆಟ್ಟಿ (ಡ್ರೈ ಡಾಕ್), ಹಡಗುಗಳ ದುರಸ್ತಿಗೆ ಸ್ಥಾಪಿಸಿರುವ ಇಂಟರ್‌ನ್ಯಾಷನಲ್‌ ಶಿಪ್ ರಿಪೇರ್‌ ಫೆಸಿಲಿಟಿ (ಐಎಸ್‌ಆರ್‌ಎಫ್‌) ಮತ್ತು ಐಒಸಿಎಲ್‌ನ ಎಲ್‌ಪಿಜಿ ಆಮದು ಟರ್ಮಿನಲ್‌ ಕೂಡಾ ಯೋಜನೆಯಲ್ಲಿ ಒಳಗೊಂಡಿವೆ. 

ಈ ವೇಳೆ ಮಾತನಾಡಿ, ‘ಭಾರತವು ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರವಾಗುತ್ತಿರುವ ಈ ಸಮಯದಲ್ಲಿ ನಾವು ನಮ್ಮ ಜಲಸಾರಿಗೆಯ ಬಲವನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದ್ದೇವೆ’ ಎಂದರು. 

ಪ್ರಧಾನಿ ಅವರು ಕೊಚ್ಚಿಯ ಮರೀನ್‌ ಡ್ರೈವ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬೂತ್‌ ಮಟ್ಟದಲ್ಲಿ ಸ್ಥಾಪಿಸಿರುವ ‘ಶಕ್ತಿ ಕೇಂದ್ರ’ಗಳ ಸುಮಾರು 6 ಸಾವಿರ ಉಸ್ತುವಾರಿಗಳು ಪಾಲ್ಗೊಂಡರು. ಭ್ರಷ್ಟಾಚಾರದ ದೊಡ್ಡ ಇತಿಹಾಸವನ್ನೇ ಹೊಂದಿರುವ ಎಲ್‌ಡಿಎಫ್‌ ಮತ್ತು ಯುಡಿಎಫ್‌ನ ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡುವಂತೆ ಅವರು ಕಾರ್ಯಕರ್ತರಲ್ಲಿ ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT