ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಯೋಜನೆಗಳ ಲಾಭ ಜನರಿಗೆ ತಲುಪುವುದು ಬಿಜೆಪಿಗೆ ಇಷ್ಟವಿಲ್ಲ: ಗೆಹಲೋತ್

Published 26 ಅಕ್ಟೋಬರ್ 2023, 10:03 IST
Last Updated 26 ಅಕ್ಟೋಬರ್ 2023, 10:03 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಲಾಭ ಮಹಿಳೆಯರು, ರೈತರು ಮತ್ತು ಬಡವರಿಗೆ ತಲುಪುವುದು ಬಿಜೆಪಿಗೆ ಇಷ್ಟವಿಲ್ಲ. ಹಾಗಾಗಿ, ರಾಜ್ಯದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಗುರುವಾರ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಅಣಿಗೊಳ್ಳುತ್ತಿರುವ ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ್ ಸಿಂಗ್‌ ದೊತಸ್ರಾ ಹಾಗೂ ಮಹುವಾ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ ಗೆಹಲೋತ್ ಕಿಡಿಕಾರಿದ್ದಾರೆ.

ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಹಲೋತ್ ಅವರ ಮಗ ವೈಭವ್ ಗೆಹಲೋತ್ ಅವರಿಗೆ ಸಮನ್ಸ್ ಜಾರಿ ಮಾಡಿರುವ ಇ.ಡಿ., ಜೈಪುರ ಅಥವಾ ನವದೆಹಲಿಯಲ್ಲಿರುವ ಕಚೇರಿಯಲ್ಲಿ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ತಮ್ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಗೆಹಲೋತ್, 'ದಿನಾಂಕ 25/10/2023, ರಾಜಸ್ಥಾನ ಮಹಿಳೆಯರಿಗಾಗಿ ಖಾತರಿ ಯೋಜನೆಗಳನ್ನು ಕಾಂಗ್ರೆಸ್ ಘೋಷಿಸಿತು. ದಿನಾಂಕ 26/10/2023, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್‌ ದೊತಸ್ರಾ ಅವರ ವಿರುದ್ಧ ಇ.ಡಿ ದಾಳಿ ನಡೆಸಲಾಯಿತು. ವಿಚಾರಣೆಗೆ ಹಾಜರಾಗುವಂತೆ ನನ್ನ ಮಗ ವೈಭವ್ ಗೆಹಲೋತ್‌ಗೆ ಸಮನ್ಸ್‌ ನೀಡಲಾಯಿತು. ರಾಜಸ್ಥಾನದಲ್ಲಿ ಕಾಂಗ್ರೆಸ್‌ ನೀಡುತ್ತಿರುವ ಖಾತರಿ ಯೋಜನೆಗಳ ಲಾಭವನ್ನು ಮಹಿಳೆಯರು, ರೈತರು ಮತ್ತು ಬಡವರು ಪಡೆಯುವುದು ಬಿಜೆಪಿಗೆ ಇಷ್ಟವಿಲ್ಲ. ಹಾಗಾಗಿ ಇ.ಡಿ ದಾಳಿ ನಡೆಸಲಾಗುತ್ತಿದೆ ಎಂದು ನಾನು ಹೇಳಿದ್ದನ್ನು ಈಗ ನೀವೇ ಅರ್ಥಮಾಡಿಕೊಳ್ಳಬಹುದು' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸೋಲುವುದು ಖಚಿತವಾಗುತ್ತಿದ್ದಂತೆ ಬಿಜೆಪಿಯು ತನ್ನ ಕೊನೆಯ ದಾಳವನ್ನು ಪ್ರಯೋಗಿಸುತ್ತಿದೆ. ಛತ್ತೀಸ್‌ಗಢದ ಬಳಿಕ ಇದೀಗ ರಾಜಸ್ಥಾನದ ಕಾಂಗ್ರೆಸ್‌ ನಾಯಕರ ವಿರುದ್ಧ ಇ.ಡಿ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT