ಹೈದರಾಬಾದ್: ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ (ಬಿಸಿ) ನಾಯಕನನ್ನು ತೆಲಂಗಾಣದ ಮುಖ್ಯಮಂತ್ರಿಯನ್ನಾಗಿ ಮಾಡುವ ಘೋಷಣೆ ಬಗ್ಗೆ ಬಿಆರ್‌ಎಸ್ ಹಾಗೂ ಎಐಎಂಐಎಂ ಶನಿವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್, ಒಬಿಸಿ ಕಲ್ಯಾಣ ಸಚಿವಾಲಯ ಸ್ಥಾಪಿಸುವ ಬೇಡಿಕೆಗೆ ಕೇಂದ್ರವು ಇನ್ನೂ ಒಪ್ಪಿಕೊಂಡಿಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗಿನಿಂದಲೂ ಒಬಿಸಿಗಳಿಗೆ ಸಚಿವಾಲಯ ಸ್ಥಾಪಿಸುವ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ತೆಲಂಗಾಣ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದೆ ಎಂದರು.
ಹಿಂದುಳಿದ ವರ್ಗಗಳ ಗಣತಿಯನ್ನು ಕೇಂದ್ರವು ನಡೆಸಿಲ್ಲ ಎಂದು ಆರೋಪಿಸಿದ ರಾಮರಾವ್ ನರೇಂದ್ರ ಮೋದಿ ಅವರು ಒಬಿಸಿಗೆ ಸೇರಿದವರು. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ದೇಶದಲ್ಲಿ ಹಿಂದುಳಿದ ವರ್ಗಗಳ ಸ್ಥಿತಿ ಬದಲಾಗಿದೆಯೇ? ಪ್ರಜಾಪ್ರಭುತ್ವದಲ್ಲಿ, ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಅಥವಾ ಪ್ರಧಾನಿಯಾದರೆ ಇಡೀ ಸಮುದಾಯಕ್ಕೆ ಪ್ರಯೋಜನವಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳ ಬಗ್ಗೆ ಬಿಜೆಪಿಗೆ ಕಾಳಜಿ ಇದ್ದರೆ ಆ ಸಮುದಾಯದ ಗಣತಿ ಏಕೆ ನಡೆಸುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಶುಕ್ರವಾರ ರಾತ್ರಿ ಜಹೀರಾಬಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಜನತೆ ತಿರಸ್ಕರಿಸುತ್ತಾರೆ. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕೆಂಬ ತಮ್ಮ ಬೇಡಿಕೆಯನ್ನು ಮೋದಿ ಅಥವಾ ರಾಹುಲ್ ಗಾಂಧಿ ಬೆಂಬಲಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.