ಲಖನೌ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸರ್ಕಾರವು ಕ್ರಮಗಳನ್ನು ಕೈಗೊಳ್ಳುವ ಬದಲು, ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಬುಧವಾರ ಸಲಹೆ ನೀಡಿದ್ದಾರೆ.
ಕೃಷಿ ಉತ್ಪನ್ನಗಳಿಗೆ 'ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ' ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾವಿರಾರು ರೈತರು 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯನ್ನು ಮಂಗಳವಾರ ಆರಂಭಿಸಿದ್ದಾರೆ. ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸಿರುವ ಶ್ರಮಿಕ ರೈತರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮಾಯಾವತಿ ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ, ಸರ್ಕಾರವು ಸೂಕ್ತ ಸಮಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಿದರೆ, ರೈತರು ಮತ್ತೆ ಮತ್ತೆ ಬೀದಿಗಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.
'ದೆಹಲಿ ಚಲೋ ಅಭಿಯಾನದ ಮೂಲಕ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬದಲು, ಕೇಂದ್ರ ಸರ್ಕಾರವು ಅವರೊಂದಿಗೆ ಸರಿಯಾದ ರೀತಿಯಲ್ಲಿ ಮಾತುಕತೆ ನಡೆಸಿ ಚಳುವಳಿಯನ್ನು ಅಂತ್ಯಗೊಳಿಸುವುದು ಉತ್ತಮ' ಎಂದೂ ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಜಾ ಕರೆ ನೀಡಿರುವ ಈ ಪ್ರತಿಭಟನಾ ಮೆರವಣಿಗೆಯಲ್ಲಿ ದೇಶದ 200ಕ್ಕೂ ಅಧಿಕ ಸಂಘಟನೆಗಳ ರೈತರು ಪಾಲ್ಗೊಂಡಿದ್ದಾರೆ.