ಮುಂಬೈ: ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ, ಹೆಸರಾಂತ ಚಿತ್ರಕಥೆಗಾರ ಸಲೀಮ್ ಖಾನ್ ಅವರಿಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಮತ್ತೊಬ್ಬ ವ್ಯಕ್ತಿ ಬೆದರಿಕೆ ಹಾಕಿದ್ದಾರೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಲೀಮ್ ಖಾನ್ ಎಂದಿನಂತೆ ಬೆಳಗಿನ ವಾಕಿಂಗ್ ಬಳಿಕ ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್ ವಾಯುವಿಹಾರ ಪ್ರದೇಶದಲ್ಲಿ ಕುಳಿತಿದ್ದಾಗ ಬೆದರಿಕೆ ಹಾಕಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರು ಉಲ್ಲೇಖಿಸಿ ಬೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಮತ್ತು ವ್ಯಕ್ತಿಯು ಸಲೀಮ್ ಖಾನ್ ಅವರನ್ನು ಕಂಡು, ಅವರ ಮುಂದೆಯೇ ವಾಹನ ನಿಲ್ಲಿಸಿದ್ದಾರೆ. ನಿನ್ನ ಬಳಿಗೆ ಲಾರೆನ್ಸ್ ಬಿಷ್ಣೋಯಿಯನ್ನು ಕಳುಹಿಸಬೇಕಾ? ಎಂದು ಪ್ರಶ್ನಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆದರಿಕೆ ಹಾಕಿದ ಬಳಿಕ ಇಬ್ಬರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಗಮನಿಸಿದ ಬಾಡಿಗಾರ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಳಿಕ, ಈ ಪ್ರದೇಶದ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಇಬ್ಬರನ್ನೂ ಪತ್ತೆ ಮಾಡಿದ್ದಾರೆ. ಇಬ್ಬರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 292ರಡಿ ಪ್ರಕರಣ ದಾಖಲಾಗಿದೆ.
2022ರ ಜೂನ್ ತಿಂಗಳಲ್ಲಿ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ವಾಯುವಿಹಾರ ಮುಗಿಸಿ ಕುಳಿತಿದ್ದ ಸಲೀಮ್ ಖಾನ್ ಬಳಿಗೆ ಬಂದಿದ್ದ ವ್ಯಕ್ತಿಯೊಬ್ಬ, ನೀನು ಮತ್ತು ನಿನ್ನ ಮಗ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಬರೆದಿದ್ದ ಪತ್ರ ನೀಡಿದ್ದರು.