ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ಮಳೆಯ ಅಬ್ಬರ | ವಿಮಾನ ನಿಲ್ದಾಣದ ಚಾವಣಿ ಕುಸಿತ, ಟ್ಯಾಕ್ಸಿ ಚಾಲಕ ಸಾವು

Published 29 ಜೂನ್ 2024, 0:20 IST
Last Updated 29 ಜೂನ್ 2024, 0:20 IST
ಅಕ್ಷರ ಗಾತ್ರ

ನವದೆಹಲಿ: ಮಳೆಯ ಅಬ್ಬರಕ್ಕೆ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–1ರ ಚಾವಣಿಯ ಒಂದು ಭಾಗ ಶುಕ್ರವಾರ ಬೆಳಿಗ್ಗೆ ಕುಸಿದಿದ್ದು, ಟ್ಯಾಕ್ಸಿ ಚಾಲಕರೊಬ್ಬರು ಮೃತಪಟ್ಟಿದ್ದಾರೆ. 

ಈ ಘಟನೆಯು ರಾಷ್ಟ್ರದ ರಾಜಧಾನಿಯ ವಿಮಾನ ನಿಲ್ದಾಣದಲ್ಲಿನ ಮೂಲಸೌಕರ್ಯಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಟರ್ಮಿನಲ್‌–1ರ ಮೂಲಕ ಕಾರ್ಯಾಚರಣೆ ನಡೆಸುವ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. 

ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ದೇಶದ ಎಲ್ಲ ವಿಮಾನ ನಿಲ್ದಾಣಗಳ ಮೂಲಸೌಕರ್ಯಗಳ ಸಮೀಕ್ಷೆ ನಡೆಸುವಂತೆಯೂ ಸೂಚಿಸಿದ್ದಾರೆ. ಚಾವಣಿಯ ಶೀಟ್‌ಗಳು ಮತ್ತು ಉಕ್ಕಿನ ತೊಲೆಗಳ ಅಡಿಯಲ್ಲಿ ಸಿಲುಕಿ ಹಲವು ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

‘ವಿಮಾನ ನಿಲ್ದಾಣದ ಟರ್ಮಿನಲ್‌–1ರ ಗೇಟ್‌ 1 ಮತ್ತು 2ರ ಬಳಿಯ ಚಾವಣಿ ಭಾರಿ ಮಳೆಯ ಕಾರಣದಿಂದ ಬೆಳಿಗ್ಗೆ 5ರ ವೇಳೆ ಕುಸಿದುಬಿದ್ದಿದೆ’ ಎಂದು ವಿಮಾನ ನಿಲ್ದಾಣದ ಡಿಸಿಪಿ ಉಷಾ ರಂಗ್ನಾನಿ ತಿಳಿಸಿದರು. 

ದೆಹಲಿ ಪೊಲೀಸ್‌, ದೆಹಲಿ ಅಗ್ನಿಶಾಮಕ ದಳ, ಸಿಐಎಸ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಮೃತಪಟ್ಟವರನ್ನು ನವದೆಹಲಿಯ ರೋಹಿಣಿ ಪ್ರದೇಶದ ನಿವಾಸಿ, ರಮೇಶ್‌ ಕುಮಾರ್ (45) ಎಂದು ಗುರುತಿಸಲಾಗಿದೆ.

‘ಮುಂಜಾನೆ ಸುರಿದ ಭಾರಿ ಮಳೆಗೆ ವಿಮಾನ ನಿಲ್ದಾಣದ ಚಾವಣಿ ಕುಸಿದಿದೆ. ಟರ್ಮಿನಲ್–1ಕ್ಕೆ ಬರುವ ಮತ್ತು ಅಲ್ಲಿಂದ ನಿರ್ಗಮಿಸುವ ಎಲ್ಲ ವಿಮಾನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ವಿಮಾನಗಳ ಸುಗಮ ಕಾರ್ಯಾಚರಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ’ ಎಂದು ಕೇಂದ್ರ ವಿಮಾನಯಾನ ಸಚಿವಾಲಯವು ‘ಎಕ್ಸ್‌’ನಲ್ಲಿ ತಿಳಿಸಿದೆ.

ಟರ್ಮಿನಲ್‌–1ನ್ನು ಇಂಡಿಗೊ ಮತ್ತು ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಗಳು ತಮ್ಮ ದೇಶಿ ವಿಮಾನ ಸೇವೆಗಳಿಗೆ ಬಳಸಿಕೊಳ್ಳುತ್ತಿವೆ. ಇಂದಿರಾಗಾಂಧಿ ವಿಮಾನ ನಿಲ್ದಾಣವು ಒಟ್ಟು ಮೂರು ಟರ್ಮಿನಲ್‌ಗಳನ್ನು ಒಳಗೊಂಡಿದ್ದು, ಪ್ರತಿದಿನ 1,400 ವಿಮಾನಗಳ ಸಂಚಾರವನ್ನು (ಆಗಮನ/ ನಿರ್ಗಮನ) ನಿರ್ವಹಿಸುತ್ತದೆ.

ಮಳೆಯ ಅಬ್ಬರ: ದೆಹಲಿಯಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು ಮೂರು ಗಂಟೆ ಧಾರಾಕಾರ ಮಳೆ ಸುರಿಯಿತು. ಹಲವು ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರು ಪರದಾಡಿದರು. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿತು. ರೋಹಿಣಿ ಪ್ರದೇಶದಲ್ಲಿ 39 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್‌ ತಗುಲಿ ಮೃತಪಟ್ಟರು. ವಸಂತ ವಿಹಾರ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಗೋಡೆ ಕುಸಿದಿದ್ದು, ಮೂವರು ಕಾರ್ಮಿಕರು ಅದರಡಿ ಸಿಲುಕಿರುವುದಾಗಿ ಶಂಕಿಸಲಾಗಿದೆ.

ಸಂಸದರ ಮನೆಗಳಿಗೆ ನುಗ್ಗಿದ ನೀರು

ಸಂಸದರಾದ ಶಶಿ ತರೂರ್‌ ಮತ್ತು ಮನೀಷ್‌ ತಿವಾರಿ ಅವರ ಮನೆಗಳಿಗೂ ನೀರು ನುಗ್ಗಿದೆ. ದೆಹಲಿಯ ಲುಟೆನ್ಸ್‌ ಪ್ರದೇಶದಲ್ಲಿರುವ ತಮ್ಮ ಮನೆಯ ಸುತ್ತಲೂ ನೀರು ಆವರಿಸಿರುವ ವಿಡಿಯೊವನ್ನು ಇಬ್ಬರೂ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಬೆಳಿಗ್ಗೆ ಎದ್ದಾಗ ಮನೆಯೊಳಗೆ ಸುಮಾರು ಒಂದು ಅಡಿಯಷ್ಟು ನೀರು ನಿಂತಿತ್ತು. ಕೊಠಡಿಗಳಲ್ಲಿದ್ದ ಪೀಠೋಪಕರಣಗಳು ಕಾರ್ಪೆಟ್‌ಗಳು ಮತ್ತು ನೆಲದಲ್ಲಿದ್ದ ಎಲ್ಲ ವಸ್ತುಗಳಿಗೂ ಹಾನಿಯಾಗಿವೆ’ ಎಂದು ತರೂರ್‌ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.  ದೆಹಲಿಯ ಸಚಿವೆ ಆತಿಶಿ ಅವರ ಮಥುರಾ ರಸ್ತೆಯ ನಿವಾಸದ ಸುತ್ತಲೂ ನೀರು ನಿಂತಿರುವ ವಿಡಿಯೊವನ್ನು ದೆಹಲಿ ಬಿಜೆಪಿ ಘಟಕವು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

88 ವರ್ಷಗಳಲ್ಲೇ ಅಧಿಕ ಮಳೆ

ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ 8.30ರಿಂದ ಶುಕ್ರವಾರ ರಾತ್ರಿ 8.30ರ ವರೆಗಿನ 24 ಗಂಟೆಗಳಲ್ಲಿ 22.8 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್‌ ತಿಂಗಳ ಸರಾಸರಿ (7.4 ಸೆಂ.ಮೀ.) ಮಳೆಗಿಂತ ಮೂರು ಪಟ್ಟು ಅಧಿಕ ಮಳೆ ಒಂದೇ ದಿನದಲ್ಲಿ ಸುರಿದಿದೆ. 1936ರ ಬಳಿಕ ಅಂದರೆ ಕಳೆದ 88 ವರ್ಷಗಳಲ್ಲಿ ಜೂನ್‌ ತಿಂಗಳಲ್ಲಿ ದಾಖಲಾದ ಅತ್ಯಧಿಕ ಮಳೆ ಇದಾಗಿದೆ.

ರಾಜಕೀಯ ಕೆಸರೆರಚಾಟ

ವಿಮಾನ ನಿಲ್ದಾಣದ ಚಾವಣಿ ಕುಸಿದ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿವೆ. ‘ಮೋದಿ ಅವರ ಕಳೆದ 10 ವರ್ಷಗಳ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಕ್ರಿಮಿನಲ್‌ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಸರ್ಕಾರದ ಮೂಲಗಳು ಇದಕ್ಕೆ ತಿರುಗೇಟು ನೀಡಿದ್ದು ‘ಈಗ ಕುಸಿದಿರುವ ಟರ್ಮಿನಲ್‌ 2009ರಲ್ಲಿ ಉದ್ಘಾಟನೆಯಾಗಿತ್ತು. ಆಗ ಕಾಂಗ್ರೆಸ್‌ ಅಧಿಕಾರದಲ್ಲಿದ್ದು ಘಟನೆಗೆ ಅವರನ್ನೇ ಹೊಣೆಯನ್ನಾಗಿಸಬೇಕು’ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷಗಳ ಮೂಲಗಳು ‘ಮೋದಿ ಸರ್ಕಾರವು ಎಂದಿನಂತೆ ಇತರರ ಮೇಲೆ ಆರೋಪ ಹೊರಿಸುತ್ತಿದೆ. ಸಮರ್ಪಕ ರೀತಿಯಲ್ಲಿ ದುರಸ್ತಿ ಕೆಲಸ ನಡೆಯದಿರುವುದೇ ಈ ಘಟನೆಗೆ ಕಾರಣ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT