ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನೀತಿಗಳಿಗೆ ಸಂಪುಟ ಅಸ್ತು

ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸಂಪುಟ ಸಭೆ
Last Updated 7 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಮುಂದುವರಿಕೆ, ಹೊಸ ಯೋಜನೆಗಳ ಆರಂಭ, ಹೊಸ ನೀತಿಗಳ ಸ್ಥಾಪನೆಗೆ ಸಂಪುಟವು ಒಪ್ಪಿಗೆ ಸೂಚಿಸಿದೆ. ಇನ್ನೇನು ಲೋಕಸಭಾ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಸರ್ಕಾರವು ಈ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ಬಟ್ಟೆಗಳ ರಫ್ತಿಗೆ ಸುಂಕ ವಿನಾಯಿತಿ

ರಫ್ತು ಮಾಡಲಾಗುವ ಸಿದ್ಧಉಡುಪುಗಳು ಮತ್ತು ಹೊದಿಕೆ/ಪರದೆಯಂತಹ ಬಟ್ಟೆಗಳಿಗೆ ವಿವಿಧ ಸುಂಕಗಳಿಂದ ವಿನಾಯಿತಿ ನೀಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ಈ ಸುಂಕಗಳಿಂದವಿನಾಯಿತಿ ನೀಡಿದರೆ ಈ ಉತ್ಪನ್ನಗಳ ರಫ್ತು ದರ ಕಡಿಮೆಯಾಗಲಿದೆ. ಇದರಿಂದ ವಿದೇಶಿ ಮಾರುಕಟ್ಟೆಗಳಲ್ಲಿ ಭಾರತೀಯ ಉಡುಪುಗಳು ಹೆಚ್ಚು ಪೈಪೋಟಿ ನೀಡಲು ಸಾಧ್ಯವಾಗುತ್ತದೆ.ಈ ವಿನಾಯಿತಿಯನ್ನು 2020ರ ಮಾರ್ಚ್ 31ರವರಗೆ ನೀಡಲಾಗುತ್ತದೆ ಎಂದು ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದ್ದಾರೆ.

ವಿಮಾನಯಾನಕ್ಕೆ ₹ 4,500 ಕೋಟಿ

ನಿಷ್ಕ್ರಿಯವಾಗಿರುವ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ₹ 4,500 ಕೋಟಿ ನೀಡಲು ಸರ್ಕಾರ ಒಪ್ಪಿಕೊಂಡಿದೆ. ‘ಈ ವಿಮಾನ ನಿಲ್ದಾಣಗಳನ್ನು ಬಳಕೆಗೆ ಯೋಗ್ಯವನ್ನಾಗಿಸಲಾಗುತ್ತದೆ.ಜನರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಲಭ್ಯವಾಗಲಿದೆ.ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಆರಂಭವಾದರೆ ಸ್ಥಳೀಯರಿಗೆ ಉದ್ಯೋಗವಕಾಶ ಹೆಚ್ಚಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಭೆಯಲ್ಲಿವಿವರಿಸಿದ್ದಾರೆ.

ಆವಿಷ್ಕಾರಕ್ಕೆ ಉತ್ತೇಜನ

ಶಾಲಾ ಮಕ್ಕಳಲ್ಲಿ ಆವಿಷ್ಕಾರದ ಮನೋಭಾವನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭಿಸಲಾಗಿದ್ದ ನಾಲ್ಕು ವರ್ಷಗಳ ‘ಅಟಲ್ ಆವಿಷ್ಕಾರ ಯೋಜನೆ’ಯನ್ನು ಇನ್ನೂ ಒಂದು ವರ್ಷ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.

ದೇಶದಾದ್ಯಂತ ಈ ಯೋಜನೆ ಅಡಿ10,000ಶಾಲೆಗಳುಪ್ರಯೋಗಾಲಯ ಹೊಂದಿವೆ. ಈ ಶಾಲೆಗಳಿಗೆ ಆರಂಭದಲ್ಲಿ ₹ 12 ಲಕ್ಷ ಮತ್ತು ನಂತರದ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ₹ 2 ಲಕ್ಷ ಅನುದಾನ ನೀಡಲಾಗಿದೆ. 2019–20ನೇ ಸಾಲಿನಲ್ಲೂ ಇದನ್ನು ಮುಂದುವರಿಸಲು ಸಂಪುಟ ಒಪ್ಪಿಗೆ ನೀಡಿದೆ.

ಯೋಜನೆ ಮುಂದುವರಿಕೆಗೆ ₹ 1,000 ಕೋಟಿ ಅನುದಾನ ನೀಡಲಾಗಿದೆ.

ಸಕ್ಕರೆ ಕಾರ್ಖಾನೆಗಳಿಗೆ ₹ 3,300 ಕೋಟಿ ಪ್ರೋತ್ಸಾಹ ಧನಮೀಸಲಿರಿಸಲಾಗಿದೆ. ಎಥೆನಾಲ್ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ

ವಿದ್ಯುತ್ ವಾಹನ; ರಾಷ್ಟ್ರೀಯ ಯೋಜನೆ

ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ತಯಾರಿಕೆಯನ್ನು ಉತ್ತೇಜಿಸಲು ಐದು ವರ್ಷಗಳ ‘ರಾಷ್ಟ್ರೀಯ ಯೋಜನೆ’ಯನ್ನು ಆರಂಭಿಸಲು ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ. 2024ರವರೆಗೆ ಈ ಯೋಜನೆ ಅಸ್ತಿತ್ವದಲ್ಲಿ ಇರಲಿದೆ.

ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯನ್ನು ದೇಶದಾದ್ಯಂತ ವಿಕೇಂದ್ರೀಕರಣಗೊಳಿಸುವುದು ಮತ್ತು ಸ್ಥಳೀಯ ಮಟ್ಟದಲ್ಲೇ ಬ್ಯಾಟರಿಯನ್ನು ತಯಾರಿಸುವುದು ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದು. ಇದಕ್ಕಾಗಿ ದೇಶದ ಹಲವೆಡೆ ಬ್ಯಾಟರಿ ತಯಾರಿಕೆಯ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲಾಗುತ್ತದೆ. ಅಲ್ಲಿ ರಫ್ತು ಗುಣಮಟ್ಟದ ಬ್ಯಾಟರಿಗಳನ್ನು ತಯಾರಿಸಲಾಗುತ್ತದೆ.

ಖಾಸಗೀಕರಣ ಸರಳ

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣವನ್ನು ಸರಳಗೊಳಿಸುವ ‘ಪರ್ಯಾಯ ಪ್ರಕ್ರಿಯೆ’ಯನ್ನ ರೂಪಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಉದ್ದಿಮೆಗಳಲ್ಲಿ ಇರುವ ಸರ್ಕಾರದ ಷೇರುಗಳ ಮಾರಾಟ, ಷೇರುಗಳ ಬೆಲೆ, ಮಾರಾಟ ಮಾಡಬೇಕಾದ ಷೇರುಗಳ ಪ್ರಮಾಣ ಮತ್ತು ಮಾರಾಟದ ಸಮಯವನ್ನು ನಿರ್ಧರಿಸಲು ಈ ಹೊಸ ವ್ಯವಸ್ಥೆ ಅನುಕೂಲ ಮಾಡಿಕೊಡಲಿದೆ.

ಚತುರ ಸಾರಿಗೆ ಅಭಿವೃದ್ಧಿಗೆ ಅನುಮತಿ

ರಸ್ತೆ ನಿರ್ಮಾಣದಲ್ಲಿ ತಂತ್ರಜ್ಞಾನ ಸಹಕಾರಕ್ಕಾಗಿ ಆಸ್ಟ್ರಿಯಾ ಜತೆ ಒಪ್ಪಂದ ಮಾಡಿಕೊಳ್ಳಲು ಸಂಪುಟವು ಅನುಮತಿ ನೀಡಿದೆ. ದ್ವಿಪಕ್ಷೀಯ ಸಹಕಾರ ಒಪ್ಪಂದದ ಪ್ರಮುಖಾಂಶಗಳು

* ಅತ್ಯಾಧುನಿಕ ರೀತಿಯಲ್ಲಿ ರಸ್ತೆ ನಿರ್ಮಾಣಕ್ಕೆ ತಂತ್ರಜ್ಞಾನ ಹಂಚಿಕೆ

* ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ವಿನ್ಯಾಸ

* ರಸ್ತೆ ಸಾರಿಗೆ ನಿರ್ವಹಣೆಗೆ ಚತುರ ವ್ಯವಸ್ಥೆ ಅಭಿವೃದ್ಧಿ

* ರಸ್ತೆ ಸಾರಿಗೆಯನ್ನು ಸುರಕ್ಷಿತಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT