ನವದೆಹಲಿ: ಇಲ್ಲಿನ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ಅಧಿಕೃತ ನಿವಾಸದ ಆವರಣದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದೆ. ಮುದ್ದಾದ ಕರುವಿಗೆ ‘ದೀಪಜ್ಯೋತಿ’ ಎಂದು ನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
‘ಗಾವಃ ಸರ್ವಸುಖ ಪ್ರದಾಃ’ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ನಮ್ಮ ಮನೆಗೆ ಹೊಸ ಸದಸ್ಯರೊಬ್ಬರು ಮಂಗಳಕರವಾಗಿ ಆಗಮಿಸಿದ್ದಾರೆ. ನಮ್ಮ ನಿವಾಸದಲ್ಲಿರುವ ಪ್ರೀತಿಯ ಹಸುವೊಂದು ಕರುವಿಗೆ ಜನ್ಮ ನೀಡಿದೆ. ಕರುವಿನ ಹಣೆಯ ಮೇಲೆ ಬೆಳಕಿನ ಗುರುತಿರುವುದರಿಂದ ಅದಕ್ಕೆ ನಾನು ‘ದೀಪಜ್ಯೋತಿ’ ಎಂದು ನಾಮಕರಣ ಮಾಡಿದ್ದೇನೆ’ ಎಂದು ‘ಎಕ್ಸ್’ನಲ್ಲಿ ಅವರು ತಿಳಿಸಿದ್ದಾರೆ.
ಕರುವನ್ನು ಮನೆಗೆ ಒಳಗೆ ಬರಮಾಡಿಕೊಂಡಿರುವ ಅವರು ದುರ್ಗಾ ಮಾತೆಯ ಮುಂದೆ ಪ್ರಾರ್ಥನೆ ಮಾಡಿದ್ದಾರೆ. ನಂತರ ಅದಕ್ಕೆ ಶಾಲು ಹೊದಿಸಿ ಹಣೆಗೆ ಮುತ್ತಿಕ್ಕಿದ್ದಾರೆ. ತೋಟಕ್ಕೆ ಕರೆದುಕೊಂಡು ಹೋಗಿ ಕರುವಿನೊಂದಿಗೆ ಆಟವಾಡಿದ್ದಾರೆ. ಈ ಕುರಿತ ವಿಡಿಯೊವನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.