ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೇಶ್‌ಖಾಲಿ ಪ್ರಕರಣ: ಕೊನೆಗೂ ಶಹಜಹಾನ್‌ರನ್ನು ಕಸ್ಟಡಿಗೆ ಪಡೆದ ಸಿಬಿಐ

Published 6 ಮಾರ್ಚ್ 2024, 15:06 IST
Last Updated 6 ಮಾರ್ಚ್ 2024, 15:06 IST
ಅಕ್ಷರ ಗಾತ್ರ

ಕೋಲ್ಕತ್ತ: ಸಂದೇಶ್‌ಖಾಲಿಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದ ಆರೋಪಿ ಶಹಜಹಾನ್‌ ಶೇಖ್‌ ಅವರನ್ನು, ಕಲ್ಕತ್ತ ಹೈಕೋರ್ಟ್‌ ಆದೇಶದಂತೆ, ಸಿಬಿಐ ಬುಧವಾರ ತನ್ನ ವಶಕ್ಕೆ ಪಡೆಯಿತು.

ಸಿಬಿಐ ಅಧಿಕಾರಿಗಳಿದ್ದ ತಂಡವೊಂದು ಇಲ್ಲಿನ ಭವಾನಿ ಭವನದಲ್ಲಿರುವ ಸಿಐಡಿ ಕೇಂದ್ರ ಕಚೇರಿಗೆ ಸಂಜೆ 4ಕ್ಕೂ ಮುಂಚೆಯೇ ತೆರಳಿತು. ಆದರೆ, ಸಂಜೆ 6.48ರ ಹೊತ್ತಿಗೆ ಸಿಐಡಿ ಅಧಿಕಾರಿಗಳು ಶಹಜಹಾನ್‌ ಅವರನ್ನು ಸಿಬಿಐಗೆ ಹಸ್ತಾಂತರಿಸಿದರು.

ಇ.ಡಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಪ್ರಕರಣದ ಆರೋಪಿಯಾಗಿರುವ ಶಹಜಹಾನ್‌ ಶೇಖ್‌ ಅವರನ್ನು ಸಂಜೆ 4.30ರ ಒಳಗೆ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಕಲ್ಕತ್ತ ಹೈಕೋರ್ಟ್‌ ಮಂಗಳವಾರ ಆದೇಶಿಸಿತ್ತು.

ಆದರೆ, ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಕಾರಣ ನೀಡಿ, ಸಿಐಡಿ ಅಧಿಕಾರಿಗಳು ಶಹಜಹಾನ್‌ ಶೇಖ್‌ ಅವರನ್ನು ಸಿಬಿಐ ವಶಕ್ಕೆ ನೀಡಲು ನಿರಾಕರಿಸಿದ್ದರು.

ಪಶ್ಚಿಮ ಬಂಗಾಳ ಸರ್ಕಾರಕ್ಕೆ ಬುಧವಾರ ಹೊಸದಾಗಿ ನಿರ್ದೇಶನ ನೀಡಿದ ಹೈಕೋರ್ಟ್‌, ‘ಶಹಜಹಾನ್‌ ಶೇಖ್‌ ಅವರನ್ನು ಸಿಬಿಐ ವಶಕ್ಕೆ ನೀಡುವಂತೆ ಸೂಚಿಸಿ ಮಂಗಳವಾರ ತಾನು ನೀಡಿದ್ದ ಆದೇಶವನ್ನು ತಕ್ಷಣವೇ ಜಾರಿಗೊಳಿಸಬೇಕು’ ಎಂದು ನಿರ್ದೇಶನ ನೀಡಿತು.

ಸಂಜೆ 4.15ರ ಒಳಗಾಗಿ ಆರೋಪಿಯನ್ನು ಸಿಬಿಐ ವಶಕ್ಕೆ ನೀಡುವಂತೆಯೂ ಹೈಕೋರ್ಟ್‌ ಗಡುವು ನೀಡಿತ್ತು.

ಆರೋಗ್ಯ ತಪಾಸಣೆ: ಸಿಬಿಐ ವಶಕ್ಕೆ ನೀಡುವುದಕ್ಕೂ ಮುನ್ನ, ಸಿಐಡಿ ಅಧಿಕಾರಿಗಳು ಶಹಜಹಾನ್‌ ಶೇಖ್‌ ಅವರನ್ನು ಆರೋಗ್ಯ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.

ಸಿಬಿಐ ಅಧಿಕಾರಿಗಳು ಶಹಜಹಾನ್‌ ಶೇಖ್‌ ಅವರನ್ನು ಇಎಸ್‌ಐ ಆಸ್ಪತ್ರೆಗೆ ಕರೆದೊಯ್ದು, ಅವರ ಆರೋಗ್ಯ ತಪಾಸಣೆ ನಡೆಸಿ ನಂತರ ನಿಜಾಮ್‌ ಪ್ಯಾಲೇಸ್‌ನಲ್ಲಿರುವ ತನ್ನ ಕಚೇರಿಗೆ ಕರೆದೊಯ್ಯಿತು. 

ನ್ಯಾಯಾಂಗ ನಿಂದನೆ ಅರ್ಜಿ: ಇ.ಡಿಗೆ ಅವಕಾಶ ನೀಡಿದ ಹೈಕೋರ್ಟ್‌

ಕೋಲ್ಕತ್ತ: ಅಮಾನತುಗೊಂಡಿರುವ ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ ಅವರನ್ನು ರಾಜ್ಯ ಪೊಲೀಸರು ಸಿಬಿಐ ವಶಕ್ಕೆ ನೀಡಲು ನಿರಾಕರಿಸಿದ್ದಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಕ್ಕೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಅವಕಾಶ ನೀಡಿ ಕಲ್ಕತ್ತ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ಇ.ಡಿ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್‌ ಜನರಲ್ ಧೀರಜ್ ತ್ರಿವೇದಿ ‘ರಾಜ್ಯ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಇನ್ನಷ್ಟು ಅವಕಾಶ ನೀಡಬೇಕು’ ಎಂದು ಕೋರಿದರು. ಈ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳಾದ ಹರೀಶ್‌ ಟಂಡನ್‌ ಹಾಗೂ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಇ.ಡಿಗೆ ಸಮಯಾವಕಾಶ ನೀಡಿತು.

ವಿಚಾರಣಾ ಪಟ್ಟಿಗೆ ತುರ್ತಾಗಿ ಸೇರ್ಪಡೆ: ಪಶ್ಚಿಮ ಬಂಗಾಳ ಮನವಿ

ನವದೆಹಲಿ: ಸಂದೇಶ್‌ಖಾಲಿಯಲ್ಲಿ ಇ.ಡಿ ಅಧಿಕಾರಿಗಳ ಮೇಲಿನ ದಾಳಿ ಕುರಿತ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಕಲ್ಕತ್ತ ಹೈಕೋರ್ಟ್‌ ನೀಡಿರುವ ಆದೇಶ ಪ್ರಶ್ನಿಸಿ ತಾನು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮನವಿ ಮಾಡಿತು. ಪಶ್ಚಿಮ ಬಂಗಾಳ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ‘ತನಿಖೆಯನ್ನು ತನಗೆ ವರ್ಗಾಯಿಸುವುದಕ್ಕೆ ಸಂಬಂಧಿಸಿ ಕಲ್ಕತ್ತ ಹೈಕೋರ್ಟ್‌ ಆದೇಶವನ್ನು ತಕ್ಷಣವೇ ಪಾಲನೆ ಮಾಡಬೇಕು ಎಂದು ಸಿಬಿಐ ಬಯಸುತ್ತಿದೆ’ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಂಕರ್‌ ದತ್ತ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜೀವ್‌ ಖನ್ನಾ ‘ನೀವು ಅರ್ಜಿ ಸಲ್ಲಿಸಿ. ಅರ್ಜಿಯನ್ನು ತುರ್ತು ವಿಚಾರಣೆ ಪಟ್ಟಿಗೆ ಸೇರಿಸುವ ಕುರಿತು ಮುಖ್ಯ ನ್ಯಾಯಮೂರ್ತಿಯವರು ನಿರ್ಧಾರ ತೆಗೆದುಕೊಂಡು ಸೂಕ್ತ ಆದೇಶ ನೀಡುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT