ಮುಂದಿನ ವರ್ಷ ಫೆ. 15ರಿಂದ ಪರೀಕ್ಷೆ 2023–24ನೇ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯ ಪರೀಕ್ಷೆ 2024ರ ಫೆಬ್ರುವರಿ 15ರಿಂದ ಆರಂಭವಾಗಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ. ಶೈಕ್ಷಣಿಕ ವರ್ಷದ ವೇಳಾಪಟ್ಟಿ ಸಿದ್ಧಪಡಿಸಲು ಮತ್ತು ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಿಕ್ಷಣ ಸಚಿವಾಲಯವು ಪರೀಕ್ಷಾ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸಲು ನಿರ್ಧರಿಸಿತ್ತು.
‘ಕಂಪಾರ್ಟ್‌ಮೆಂಟ್’ ಪರೀಕ್ಷೆ ಇನ್ನು ಪೂರಕ ಪರೀಕ್ಷೆ ನವದೆಹಲಿ (ಪಿಟಿಐ): 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದ ‘ಕಂಪಾರ್ಟ್‌ಮೆಂಟ್’ ಪರೀಕ್ಷೆಯ ಹೆಸರನ್ನು ‘ಪೂರಕ’ ಪರೀಕ್ಷೆ ಎಂದು ಬದಲಿಸಿರುವುದಾಗಿ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರಾದ ಸಂಯಮ್ ಭಾರದ್ವಾಜ್ ಶುಕ್ರವಾರ ತಿಳಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಮೂಲಕ ಎರಡು ವಿಷಯಗಳಲ್ಲಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಅವಕಾಶ ಪಡೆಯಲಿದ್ದಾರೆ. ಜುಲೈನಲ್ಲಿ ಪೂರಕ ಪರೀಕ್ಷೆ: ಈ ವರ್ಷ ಜುಲೈನಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುವುದು. ಸದ್ಯದಲ್ಲಿಯೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. 10ನೇ ತರಗತಿಯ 1.34 ಲಕ್ಷ ಹಾಗೂ 12ನೇ ತರಗತಿಯ 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.