ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

CBSE Class 12 Results 2024: ಫಲಿತಾಂಶ ಪ್ರಕಟ– ಬಾಲಕಿಯರೇ ಮೇಲುಗೈ

ಕೇಂದ್ರೀಯ ಶಾಲಾ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 2024ನೇ ಸಾಲಿನ 12 ನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ
Published 13 ಮೇ 2024, 6:24 IST
Last Updated 13 ಮೇ 2024, 6:24 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಈ ಸಾಲಿನಲ್ಲೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. 

10ನೇ ತರಗತಿಯ ಉತ್ತೀರ್ಣ ಪ್ರಮಾಣ ಶೇ 93.60. ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಶೇ 0.48ರಷ್ಟು ಹೆಚ್ಚಳವಾಗಿದೆ. 12ನೇ ತರಗತಿ ಉತ್ತೀರ್ಣ ಪ್ರಮಾಣ ಶೇ 87.98. ಕಳೆದ ಸಾಲಿಗಿಂತ ಶೇ 0.65ರಷ್ಟು ಹೆಚ್ಚಳವಾಗಿದೆ.

ಇದೇ ರೀತಿ, ಈ ಬಾರಿ ಶೇ 90 ಮತ್ತು ಶೇ 95 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 

12ನೇ ತರಗತಿಯಲ್ಲಿ ಒಟ್ಟು 1.16 ಲಕ್ಷ ವಿದ್ಯಾರ್ಥಿಗಳು ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಇವರಲ್ಲಿ 262 ವಿದ್ಯಾರ್ಥಿಗಳು ವಿಶೇಷ ಸೌಲಭ್ಯಗಳ ಅಗತ್ಯವಿರುವ ಮಕ್ಕಳ ವರ್ಗಕ್ಕೆ (ಸಿಎಸ್‌ಡಬ್ಲ್ಯುಎನ್‌) ಸೇರಿದವರಾಗಿದ್ದಾರೆ. 24,068 ವಿದ್ಯಾರ್ಥಿಗಳು ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಅವರಲ್ಲಿ 43 ವಿದ್ಯಾರ್ಥಿಗಳು ಸಿಎಸ್‌ಡಬ್ಲ್ಯುಎನ್‌ಗೆ ಸೇರಿದವರಿದ್ದಾರೆ. 

10ನೇ ತರಗತಿಯಲ್ಲಿ 47,000 ವಿದ್ಯಾರ್ಥಿಗಳು ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 2.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 10ನೇ ತರಗತಿಯಲ್ಲಿ 11,000 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳಿಸಿದ್ದಾರೆ. 

ಕಾರ್ಯದಕ್ಷತೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಖ್ಯೆಯನ್ನು ಈ ಬಾರಿಯ ಪರೀಕ್ಷೆಗಳಲ್ಲಿ ಹೆಚ್ಚಿಸಲಾಗಿತ್ತು. ಹೀಗಾಗಿ ಉತ್ತಮ ಫಲಿತಾಂಶ ದಾಖಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೆರಿಟ್‌ ಪಟ್ಟಿ ಇಲ್ಲ: ವಿದ್ಯಾರ್ಥಿಗಳ ನಡುವೆ ಅನಾರೋಗ್ಯಕರ ಸ್ಪರ್ಧೆಯನ್ನು ತಡೆಯುವ ದಿಸೆಯಲ್ಲಿ ಮೆರಿಟ್‌ ಪಟ್ಟಿಯನ್ನು ಬಿಡುಗಡೆ ಮಾಡುವುದು ಬೇಡ ಎಂದು ಸಿಬಿಎಸ್ಇ ಈ ಹಿಂದೆಯೇ ನಿರ್ಧರಿಸಿತ್ತು. ಅದರಂತೆ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿಲ್ಲ. ಆದರೆ, ವಿವಿಧ ವಿಷಯಗಳಲ್ಲಿ ಅತಿಹೆಚ್ಚು ಅಂಕ ಗಳಿಸಿರುವ ಶೇ 0.1 ವಿದ್ಯಾರ್ಥಿಗಳಿಗೆ ಮಂಡಳಿಯು ಪ್ರಮಾಣ ಪತ್ರವನ್ನು ನೀಡಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಾಮ್‌ ಭಾರದ್ವಾಜ್‌ ಹೇಳಿದ್ದಾರೆ.

2024–25ನೇ ಸಾಲಿನ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರುವರಿ 15ರಿಂದಲೇ ಆರಂಭಿಸಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ. 

ಜುಲೈ 15ರಿಂದ ಪೂರಕ ಪರೀಕ್ಷೆ: 10ನೇ ತರಗತಿಯ 1.32 ಲಕ್ಷ ಅಭ್ಯರ್ಥಿಗಳು ಪೂರಕ ಪರೀಕ್ಷೆ ಬರೆಯುವ ಸಂಭವ ಇದೆ. 12ನೇ ತರಗತಿಯ 1.22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪೂರಕ ಪರೀಕ್ಷೆ ಬರೆಯುವ ಸಂಭವವಿದೆ. ಜುಲೈ 15ರಿಂದ 10 ಮತ್ತು 12ನೇ ತರಗತಿಗಳ ಪೂರಕ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತಿಳಿಸಿದೆ.

10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ತಿರುವನಂತಪುರಂ ವಲಯದಲ್ಲಿ ಕ್ರಮವಾಗಿ ಶೇ 99.91 ಮತ್ತು ಶೇ 99.75 ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಈ ಮೂಲಕ ಆ ವಲಯವು ಅತಿ ಹೆಚ್ಚು ಫಲಿತಾಂಶ ದಾಖಲಿಸಿದಂತಾಗಿದೆ. ಪ್ರಯಾಗ್‌ರಾಜ್‌ ವಲಯವು 12ನೇ ತರಗತಿಯಲ್ಲಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದ್ದು, ಶೇ 78.25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10ನೇ ತರಗತಿಯಲ್ಲಿ ಗುವಾಹಟಿ ವಲಯವು ಶೇ 77.94 ಉತ್ತೀರ್ಣ ಫಲಿತಾಂಶ ಪಡೆವ ಮೂಲಕ ಅತಿ ಕಡಿಮೆ ಫಲಿತಾಂಶ ದಾಖಲಿಸಿರುವ ವಲಯ ಎನಿಸಿಕೊಂಡಿದೆ.

10ನೇ ತರಗತಿಯಲ್ಲಿ ಜವಾಹರ್‌ ನವೋದಯ ವಿದ್ಯಾಲಯ ಶಾಲೆಗಳು ಶೇ 99.09 ಫಲಿತಾಂಶ ದಾಖಲಿಸಿ ಮೊದಲ ಸ್ಥಾನದಲ್ಲಿವೆ, ಸೆಂಟ್ರಲ್‌ ಟಿಬೆಟನ್‌ ಸ್ಕೂಲ್ ಅಡ್ಮಿನಿಸ್ಟ್ರೇಷನ್‌ ಶಾಲೆಗಳು 12ನೇ ತರಗತಿಯಲ್ಲಿ ಶೇ 99.23 ಫಲಿತಾಂಶ ದಾಖಲಿಸಿ ಮೊದಲ ಸ್ಥಾನದಲ್ಲಿವೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ತೇರ್ಗಡೆಯಾದ ವಿದ್ಯಾರ್ಥಿಗಳನ್ನು ‘ಎಕ್ಸ್‌’ ಮೂಲಕ ಅಭಿನಂದಿಸಿದ್ದಾರೆ.cbse.gov.in ನಲ್ಲಿ ಫಲಿತಾಂಶ ವೀಕ್ಷಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT