ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10, 12ನೇ ತರಗತಿ ಬೋರ್ಡ್ ಪರೀಕ್ಷೆ ವರ್ಗ, ಶ್ರೇಣಿ ಕ್ರಮ ಕೈಬಿಟ್ಟ ಸಿಬಿಎಸ್ಇ

Published 1 ಡಿಸೆಂಬರ್ 2023, 16:01 IST
Last Updated 1 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ನವದೆಹಲಿ: 10 ಮತ್ತು 12ನೇ ತರಗತಿಗಳ ಬೋರ್ಡ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಆಧರಿಸಿ ವರ್ಗ ಅಥವಾ ಅತ್ಯುನ್ನತ ಶ್ರೇಣಿ ನೀಡುವ ಕ್ರಮವನ್ನು ಕೈಬಿಡಲು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) ತೀರ್ಮಾನಿಸಿದೆ.

ಸಿಬಿಎಸ್‌ಇ ಪರೀಕ್ಷಾ ನಿಯಂತ್ರಣಾಧಿಕಾರಿ ಸನ್ಯಾಮ್‌ ಭಾರಧ್ವಾಜ್‌ ಅವರು ಶುಕ್ರವಾರ ನೀಡಿದ ಹೇಳಿಕೆಯಲ್ಲಿ ಇದನ್ನು ದೃಢಪಡಿಸಿದ್ದಾರೆ.

‘ಮಂಡಳಿಯು ಇನ್ನು ಮುಂದೆ ಅಂಕಗಳ ಶೇಕಡವಾರು ಲೆಕ್ಕ ಹಾಕುವುದಿಲ್ಲ, ಪ್ರಕಟಿಸುವುದಿಲ್ಲ, ತಿಳಿಸುವುದಿಲ್ಲ. ಉನ್ನತ ಶಿಕ್ಷಣ ಅಥವಾ ಉದ್ಯೋಗ ನೇಮಕಾತಿಗೆ ಇದರ ಅಗತ್ಯವಿದ್ದಲ್ಲಿ ಪ್ರವೇಶ ನೀಡುವ ಶಿಕ್ಷಣ ಸಂಸ್ಥೆ ಅಥವಾ ಉದ್ಯೋಗದಾತರೇ ಮಾಡಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ. 

‘ಅಂಕಗಳ ಕ್ರೋಡೀಕರಣ, ಪ್ರಮಾಣವನ್ನು ನಿಗದಿಪಡಿಸಲು ಮಂಡಳಿಯು ಅನುಸರಿಸುವ ಅಳತೆಗೋಲು ಕುರಿತಂತೆ ಹಲವು ವಿದ್ಯಾರ್ಥಿಗಳು ಮಂಡಳಿಗೆ ವಿವರ ಕೇಳಿದ್ದರು’ ಎಂದೂ ಅವರು ಈ ಕುರಿತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

‘ಮಂಡಳಿಯ ಪರೀಕ್ಷಾ ಬೈ–ಲಾದ ಅಧ್ಯಾಯ 7ರ ಉಪವರ್ಗ 40.1ರ ಅನುಸಾರ ಇನ್ನು ಮುಂದೆ ಒಟ್ಟಾರೆ ಅಂಕಗಳ ಆಧಾರದಲ್ಲಿ ವರ್ಗ, ಅತ್ಯುನ್ನತ ಶ್ರೇಣಿ ಅಥವಾ ಸರಾಸರಿ ಅಂಕಗಳ ವಿವರಗಳನ್ನು ನೀಡಲಾಗದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಯು ಐದಕ್ಕೂ ಹೆಚ್ಚು ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದಲ್ಲಿ ಅತ್ಯುತ್ತಮ ಐದು ವಿಷಯಗಳ ಆಯ್ಕೆಯನ್ನೂ ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡುವ ಸಂಸ್ಥೆ ಅಥವಾ ನೇಮಕಾತಿಗೆ ಪರಿಗಣಿಸುವ ಉದ್ಯೋಗದಾತರೇ ತೀರ್ಮಾನಿಸಬಹುದು ಎಂದು ತಿಳಿಸಿದ್ದಾರೆ.

ಪರೀಕ್ಷಾ ಮಂಡಳಿಯು ಕಳೆದ ಶೈಕ್ಷಣಿಕ ವರ್ಷದಲ್ಲಿ 10 ಮತ್ತು 12ನೇ ತರಗತಿಗಳಲ್ಲಿನ ಅಂಕಗಳಿಕೆ ಆಧರಿಸಿ ಅತ್ಯುನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ವಿವರಗಳನ್ನು ಪ್ರಕಟಿಸಿರಲಿಲ್ಲ. ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಸ್ಪರ್ಧೆಯನ್ನು ತಡೆಯುವುದು ಇದರ ಉದ್ದೇಶವಾಗಿತ್ತು.

ಫೆ. 15ರಿಂದ ಪರೀಕ್ಷೆಗಳು ಆರಂಭ


ನವದೆಹಲಿ: 2023–24ನೇ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷಾ ವೇಳಾಪಟ್ಟಿಯನ್ನು ಸಿಬಿಎಸ್‌ಇ ಶುಕ್ರವಾರ ಪ್ರಕಟಿಸಿದೆ.

ಆ ಪ್ರಕಾರ, 10 ಮತ್ತು 12ನೇ ತರಗತಿ ಪರೀಕ್ಷೆಗಳು 2024ರ ಫೆಬ್ರುವರಿ 15ರಿಂದ ಆರಂಭವಾಗಲಿವೆ. ಪರೀಕ್ಷಾ ಪ್ರಕ್ರಿಯೆಗಳು ಅಂದಾಜು 55 ದಿನ ನಡೆಯಲಿದ್ದು, ಏಪ್ರಿಲ್‌ 10ರಂದು ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದು ತಿಳಿಸಿದೆ.

 

 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT