ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಿಗಾಗಿ ಸಮಿತಿ ರಚಿಸಿದ ಕೇಂದ್ರ: ಮಾದಿಗರ ಮತ ಸೆಳೆಯಲು ಬಿಜೆಪಿ ಕಸರತ್ತು

Published 19 ಜನವರಿ 2024, 21:57 IST
Last Updated 19 ಜನವರಿ 2024, 21:57 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಮುನ್ನ ದಕ್ಷಿಣದ ರಾಜ್ಯಗಳಲ್ಲಿ
ಮಾದಿಗ ಸಮುದಾಯವನ್ನು ಓಲೈಸಲು ಪ್ರಯತ್ನ ಮುಂದುವರಿಸಿರುವ ನರೇಂದ್ರ
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾದಿಗ ಸಮುದಾಯ ಸೇರಿದಂತೆ ಇತರ ಪರಿಶಿಷ್ಟ ಜಾತಿಗಳ ಹಿತಾಸಕ್ತಿ ಕಾಪಾಡಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳ ಕುರಿತು ಪರಿಶೀಲಿಸುವುದಕ್ಕೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. 

ತೆಲಂಗಾಣ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ
ಯವರು, ‘ಮಾದಿಗರ ಸಬಲೀಕರಣಕ್ಕಾಗಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಮಾಡಬೇಕೆಂಬ ಬೇಡಿಕೆ ಈಡೇರಿಕೆಯ ಸಾಧ್ಯಾಸಾಧ್ಯತೆ ಪರಿಶೀಲಿಸಲು ಕೇಂದ್ರ ಶೀಘ್ರದಲ್ಲೇ ಸಮಿತಿ ರಚಿಸಲಿದೆ’ ಎಂದು ಹೇಳಿದ್ದರು. ಪ್ರಧಾನಿ ಅವರ ನಿರ್ದೇಶನದ ಮೇರೆಗೆ ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಈಗ ಸಮಿತಿ ರಚಿಸಲಾಗಿದೆ. 

‘ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಒಳ ಪಂಗಡಗಳನ್ನು ನಾಲ್ಕು
ವರ್ಗಗಳಾಗಿ ವಿಂಗಡಿಸಿ ಒಳಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯಕ್ಕೆ 2023ರ ಮಾರ್ಚ್‌ 28ರಂದು ಪತ್ರ ಬರೆದಿತ್ತು.

ಆಂಧ್ರ ಪ್ರದೇಶ ಸರ್ಕಾರ ಹಾಗೂ ಇ.ವಿ.ಚಿನ್ನಯ್ಯ ನಡುವಿನ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪರಿಶಿಷ್ಟ ಜಾತಿಗಳ ಇನ್ನಷ್ಟು ಒಳ ವರ್ಗೀಕರಣಕ್ಕೆ ಅವಕಾಶ ಇಲ್ಲ ಎಂದು 2004ರ ನವೆಂಬರ್‌ನಲ್ಲಿಯೇ ತೀರ್ಪು ನೀಡಿತ್ತು. ಈ ನಡುವೆ, ಪಂಜಾಬ್‌ ಸರ್ಕಾರ ಹಾಗೂ ಸಿಂಗ್‌ ನಡುವಿನ ಪ್ರಕರಣದ ವಿಚಾರಣೆ ನಡೆಸಿದ್ದ ಸಂವಿಧಾನ ಪೀಠವು ಇ.ವಿ. ಚಿನ್ನಯ್ಯ ಪ್ರಕರಣದ ಆದೇಶದ ಮರುಪರಿಶೀಲನೆ ಅಗತ್ಯವಿದೆ ಎಂದು 2020ರ ಆಗಸ್ಟ್‌ನಲ್ಲಿ ಅಭಿಪ್ರಾಯಪಟ್ಟಿತ್ತು.  ಈ ವಿಷಯವನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವಂತೆ ಸಂವಿಧಾನ ಪೀಠವುಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಶಿಫಾರಸು ಮಾಡಿತ್ತು. 

‘ಭಾರತೀಯ ಸಂವಿಧಾನದ ಈಗಿನ ವಿಧಿಗಳ ಅನ್ವಯ, ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣಕ್ಕೆ
ಅನುಮತಿ ಇಲ್ಲ’ ಎಂದು ಕೇಂದ್ರ ಸಚಿವ
ಎ.ನಾರಾಯಣಸ್ವಾಮಿ ಅವರು ಸಂಸತ್‌
ಅಧಿವೇಶನದಲ್ಲಿ ಹೇಳಿದ್ದರು. 

‘ಆಂಧ್ರ ಪ್ರದೇಶದ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ವಿಷಯದ ಕುರಿತು ಪರಿಶೀಲನೆ ನಡೆಸಿದ್ದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು, ಇದಕ್ಕೆ ಅವಕಾಶ ಕಲ್ಪಿಸಲು ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡುವಂತೆ ಶಿಫಾರಸು ಮಾಡಿದೆ. ಆಯೋಗದ  ಶಿಫಾರಸುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಸೂಚಿಸಲಾಗಿತ್ತು. ಇಲ್ಲಿಯವರೆಗೆ 20 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆಗಳು ಬಂದಿವೆ. ಈ ಪೈಕಿ ಏಳು ರಾಜ್ಯಗಳು ಉಪ-ವರ್ಗೀಕರಣದ ಪರವಾಗಿವೆ. 13 ರಾಜ್ಯಗಳು,ಒಂದು ಕೇಂದ್ರಾಡಳಿತ ಪ್ರದೇಶ ಇದಕ್ಕೆ ವಿರುದ್ಧವಾಗಿವೆ’ ಎಂದು ತಿಳಿಸಿದ್ದರು. 

ಸಮುದಾಯದ ಬೇಡಿಕೆ ಏನು?

‘ಪರಿಶಿಷ್ಟ ಜಾತಿಗಳಿಗೆ ನಿಗದಿಯಾದ ಮೀಸಲಾತಿ ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳು ಸಮುದಾಯಗಳಲ್ಲಿ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಹೀಗಾಗಿ ಮಾದಿಗ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ಮಾಡಬೇಕು’ ಎಂಬುದು ಈ ಸಮುದಾಯದ ಒತ್ತಾಯ

ಯಾವ ರಾಜ್ಯಗಳಿಂದ ಈ ಬೇಡಿಕೆ?

ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳಿಂದ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಕೆ. ಒಳಮೀಸಲಾತಿ ಕುರಿತು ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಿಂದ ಗುರುವಾರವಷ್ಟೇ ತೀರ್ಮಾನ

ಸಮಿತಿಯ ಮೊದಲ ಸಭೆ 23ಕ್ಕೆ

ಉನ್ನತ ಮಟ್ಟದ ಸಮಿತಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಕಾನೂನು ವ್ಯವಹಾರಗಳ ಇಲಾಖೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿಗೆ ಸ್ಥಾನ. ಇದೇ 23ರಂದು ಸಮಿತಿಯ ಮೊದಲ ಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT