ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ತಿಂಗಳಲ್ಲಿ ಅಂತರರಾಜ್ಯ ಗಡಿ ಗುರುತಿಸುವ ಕಾರ್ಯ ಪೂರ್ಣಗೊಳಿಸಿ: ಸುಪ್ರೀಂ ಸೂಚನೆ

Last Updated 17 ಸೆಪ್ಟೆಂಬರ್ 2018, 19:31 IST
ಅಕ್ಷರ ಗಾತ್ರ

ನವದೆಹಲಿ: ಬಳ್ಳಾರಿ ಸಮೀಪ ಕಬ್ಬಿಣದ ಅದಿರಿನ ಗಣಿಗಳಿಗೆ ಅಂಟಿಕೊಂಡಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ನಡುವಿನ ಅಂತರರಾಜ್ಯ ಗಡಿ ರೇಖೆ ಗುರುತಿಸುವ ಪ್ರಕ್ರಿಯೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸರ್ವೇ ಆಫ್‌ ಇಂಡಿಯಾ ಅಧಿಕಾರಿಗಳು ಉಭಯ ರಾಜ್ಯಗಳ ಅಧಿಕಾರಿಗಳೊಂದಿಗೆ ಕಳೆದ ತಿಂಗಳು ಅಂತರರಾಜ್ಯ ಗಡಿಯಲ್ಲಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿತ್ತು. ನಂತರ, ಸರ್ವೇಯರ್ ಜನರಲ್ ನೀಡಿದ ಅಂತಿಮ ವರದಿಯಲ್ಲಿರುವ ಕೆಲವು ಅಂಶಗಳ ಕುರಿತು ಆಂಧ್ರಪ್ರದೇಶ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಕರ್ನಾಟಕ ಸರ್ಕಾರ ವರದಿಯನ್ನು ಒಪ್ಪಿಕೊಂಡಿದೆ.

ಕೇಂದ್ರದ ವರದಿಗೆ ಸಂಬಂಧಿಸಿದಂತೆ ಕೆಲವು ಗಣಿ ಕಂಪೆನಿಗಳ ಪರ ಆಕ್ಷೇಪ ವ್ಯಕ್ತಪಡಿಸಲು ಹಿರಿಯ ವಕೀಲ ಕೃಷ್ಣನ್‌ ವೇಣುಗೋಪಾಲ್‌ ಅವರು ಅವಕಾಶ ಕೋರಿದರಾದರೂ ಅದನ್ನು ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅವರಿದ್ದ ಪೀಠ ಪುರಸ್ಕರಿಸಲಿಲ್ಲ.

‘ವರದಿಯ ಜಾರಿಗೆ ಎಷ್ಟು ಕಾಲಾವಕಾಶದ ಅಗತ್ಯವಿದೆ’ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌, ಈ ಪ್ರಕ್ರಿಯೆಗೆ ನಾಲ್ಕರಿಂದ ಐದು ತಿಂಗಳು ಬೇಕಾಗಬಹುದು ಎಂದರು. ಆಗ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಆರು ತಿಂಗಳು ಮುಂದೂಡಿತು.

ಕೇಂದ್ರದ ವರದಿಗೆ ಸಂಬಂಧಿಸಿದಂತೆ ಆಕ್ಷೇಪ ಸಲ್ಲಿಸಲು ಅವಕಾಶ ನೀಡುವಂತೆ ಆಂಧ್ರಪ್ರದೇಶ ಸರ್ಕಾರದ ಪರ ವಕೀಲ ಎ.ಕೆ. ಗಂಗೂಲಿ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, ‘ಗಡಿಯನ್ನು ಗುರುತಿಸುವ ಕಾರ್ಯವನ್ನು ನಾವು ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಈ ಕಾರ್ಯ ಮಾಡುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT